ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದಿದ್ದ ಗಲಾಟೆ ವಿಚಾರವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಸಾವರ್ಕರ್ ಭಾವಚಿತ್ರ ಹರಿದು ಹಾಕಿದ ನಂತರ ಶಿವಮೊಗ್ಗ ಅಷ್ಟೇ ಅಲ್ಲದೇ. ಇಡೀ ರಾಜ್ಯದಲ್ಲಿ ಗೊಂದಲ ಉಂಟು ಮಾಡುವ ಪ್ರಯತ್ನವನ್ನು ವಿಛಿದ್ರಕಾರಕ ಶಕ್ತಿಗಳು ನಡೆಸಿದರು. ಅದನ್ನು ಎದುರಿಸುವ ದಿಕ್ಕಿನಲ್ಲಿ ಸರಕಾರ ಹಾಗು ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಆದರೂ ಕೂಡಾ ಮುಂಜಾಗ್ರತಾ ಕ್ರಮವಾಗಿ, ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣದಿಂದ 144 ಸೆಕ್ಷನ್ ನಿಷೇಧಾಜ್ಞೆ ಮುಂದುವರಿದಿದೆ. ವ್ಯಾಪಾರ ವ್ಯವಹಾರಕ್ಕೆ ತೊಂದರೆ ಇಲ್ಲ. ಶಾಲಾ ಕಾಲೇಜು ಆರಂಭವಾಗಿವೆ. ಯಾರೂ ಗಲಾಟೆ ಮಾಡಬಾರದು. ದೊಡ್ಡ ದೊಡ್ಡ ಗುಂಪು ಸೇರಬಾರದು ಅಂತಾ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಜಿಲ್ಲಾಡಳಿತ ಕ್ರಮವನ್ನು ಸ್ವಾಗತಿಸುತ್ತೇನೆ ಎಂದರು.
ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂದಿಸಿದಂತೆ ಈ ಬೆಳವಣಿಗೆ ಒಳ್ಳೆಯದಲ್ಲ ಅಂತಾ ಸಿಎಂ, ನಮ್ಮ ನಾಯಕರು ಹೇಳಿದ್ದಾರೆ ಅದಕ್ಕೆ ನಮ್ಮ ಸಹಮತವಿದೆ ಎಂದು ಈಶ್ವರಪ್ಪ ತಿಳಿಸಿದರು.
ಸಿದ್ದರಾಮಯ್ಯ ಹಾಗು ರಂಭಾಪುರಿ ಶ್ರೀ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಈ ಬಗ್ಗೆ ನನಗೆ ಗೊತ್ತಿಲ್ಲ. ಬಾಳೆಹೊನ್ನೂರು ಸ್ವಾಮಿಗಳು ಈ ರೀತಿ ಹೇಳಿದ್ದಾರೆ. ಸಿದ್ದರಾಮಯ್ಯ ಹೇಳಿಲ್ಲ ಎನ್ನುತ್ತಿದ್ದಾರೆ. ಈಗ ಬಾಳೆಹೊನ್ನೂರು ಸ್ವಾಮಿಗಳು ಹೇಳಿದ್ದು ಸತ್ಯವೋ, ಸಿದ್ದರಾಮಯ್ಯ ಹೇಳಿದ್ದು ಸತ್ಯವೋ ಎಂಬ ಬಗ್ಗೆ ತೀರ್ಮಾನ ಆಗಬೇಕು ಎಂದರು.