ಸಾವರ್ಕರ್ ಭಾವ ಚಿತ್ರ ಸುಟ್ಟ ವಿಚಾರ: ಕಾಂಗ್ರೆಸ್‌ನ ಹಿರಿಯರು ತಿದ್ದಿ ಬುದ್ಧಿ ಹೇಳಿ ಅಂದ್ರು ಚಕ್ರವರ್ತಿ ಸೂಲಿಬೆಲೆ.!

ಧಾರವಾಡ: ಸಾವರ್ಕರ್ ಭಾವಚಿತ್ರ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಯುವಾ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನವರ ಈ ಕೃತ್ಯಕ್ಕೆ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ. ಅವರ ಈ ವರ್ತನೆ ಹೊಸ ಬೆಳವಣಿಗೆ ಏನಲ್ಲ. ಸಾವರ್ಕರ್‌ ಮತ್ತು ರಾಷ್ಟ್ರ ಭಕ್ತರಿಗೆ ಅವಮಾನಿಸೋ ಪ್ರಕ್ರಿಯೆ ಕಾಂಗ್ರೆಸ್‌ನಲ್ಲಿ ಯಾವಾಗಲೂ ಇದೆ. ದುರಾದೃಷ್ಟ ಅಂದ್ರೆ ನಾವು ಧಾರವಾಡಕ್ಕೆ ಬಂದಾಗಲೆ ಹೀಗೆ ಆಗಿದೆ ಎಂದರು.

ಧಾರವಾಡ ತಿಲಕರು ಬಂದು ಹೋದ ಜಾಗ. ಆಲೂರ ವೆಂಕಟರಾಯರು ತಿಲಕರ ಭಾಷಣವನ್ನು ಕನ್ನಡಕ್ಕೆ ಇಲ್ಲಿಯೇ ಅನುವಾದಿಸಿದ್ದರು. ಕರ್ನಾಟಕದ ಏಕೀಕರಣದ ಚಿಂತನೆ ಬೀಜ ಹಾಕಿದ್ದು ಧಾರವಾಡದಲ್ಲಿ. ಇತಿಹಾಸಕ್ಕೆ ನಾವು ಇಷ್ಟು ಗೌರವ ಕೊಟ್ಟು ಧಾರವಾಡಕ್ಕೆ ಬಂದಿದ್ದೇವೆ. ಈ ವೇಳೆ ಕಾಂಗ್ರೆಸ್‌ನವರು ಇತಿಹಾಸವನ್ನು ತುಚ್ಛವಾಗಿ ತೋರಿಸುತ್ತಿದ್ದಾರೆ. ಇತಿಹಾಸ ಪುರುಷರನ್ನು ಅವಮಾನಿಸುತ್ತಿದ್ದಾರೆ. ಇದು ಖಂಡನೀಯ. ಇದು ಕಾಂಗ್ರೆಸ್‌ಗಂತೂ ಒಳ್ಳೆಯದಲ್ಲ ಎಂದು ಹರಿಹಾಯ್ದರು.

ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿದ್ದೇವೆ. ಇಂಥಹ ಸಮಯದಲ್ಲಿ ಸಾವರ್ಕರ್‌ಗೆ ಅವಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯರು ತಿದ್ದಿ ಬುದ್ಧಿ ಹೇಳಬೇಕಾದ ಅಗತ್ಯವಿದೆ. ಮೊಟ್ಟೆ ಎಸೆದಿದ್ದನ್ನೂ ನಾವೂ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ಸಾವರ್ಕರ್‌ಗೆ ಮೊಟ್ಟೆ ಎಸೆದಾಗ ಸಿದ್ದರಾಮಯ್ಯ ಮೌನವಾಗಿದ್ದಾರೆ. ಇದು ಬಹಳ ದುರದುಷ್ಟಕರ ಸಂಗತಿ. ಸಿದ್ದರಾಮಯ್ಯಗಿಂತ ಹೆಚ್ಚಿನ ರಾಷ್ಟ್ರ ಕಾರ್ಯ ಸಾವರ್ಕರ್ ಮಾಡಿದ್ದಾರೆ. ಇತಿಹಾಸ ಪುರುಷರಿಗೆ ಗೌರವ ಕೊಡುವ ಪದ್ಧತಿ ಕಾಂಗ್ರೆಸ್‌ಗರು ಕಲಿಯಬೇಕು ಎಂದು ಚಿಂತಕ ಸೂಲಿಬೆಲೆ ಆಕ್ರೋಶ ಹೊರಹಾಕಿದ್ದಾರೆ.