ಸಣ್ಣ ವಿಚಾರದ ಭೀಕರ ಅಂತ್ಯ – ಸ್ನೇಹಿತನನ್ನು ಕೊಂದ ಗೆಳೆಯ

ಬೆಂಗಳೂರು, ಆಗಸ್ಟ್​ 05: 20 ರೂಪಾಯಿ ವಿಮಲ್ ವಿಚಾರಕ್ಕೆ ಕೊಲೆ ಮಾಡಿದ್ದ ಆರೋಪಿಯನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೀತಾರಾಂ ಬಂಧಿತ ಆರೋಪಿ. ಜಿತೇಂದ್ರ ಪಾಂಡೆ ಅಲಿಯಾಸ್ ಬಬ್ಲು ಕೊಲೆಯಾದವ. ಬಿಹಾರ ಮೂಲದ ಸೀತಾರಾಂ ಮತ್ತು ಜಿತೇಂದ್ರ ಪಾಂಡೆ ಸ್ನೇಹಿತರಾಗಿದ್ದರು. ವರ್ತೂರಿನ‌ ರಾಮಗೊಂಡನಹಳ್ಳಿ ಖಾಸಗಿ ಶಾಲೆಯ ಕಟ್ಟಡದ ಟೈಲ್ಸ್ ಕೆಲಸ ಮಾಡುತ್ತಿದ್ದರು.

ಜುಲೈ 28 ರಂದು ರಾತ್ರಿ ಇಬ್ಬರು ಒಟ್ಟಿಗೆ ಮದ್ಯಪಾನ ಸೇವಿಸಿ ಪಾರ್ಟಿ ಮಾಡಿದ್ದಾರೆ. ಜಿತೇಂದ್ರ ಪಾಂಡೆಯು ಸೀತಾರಾಂ ಪಾಂಡೆಗೆ 20 ರೂಪಾಯಿಗೆ ವಿಮಲ್ ತಗೊಂಡು ಬಾ ಎಂದು ಹೇಳಿದ್ದನು. ನನಗೆ ವಿಮಲ್ ತರಲು ಕಳುಹಿಸುತ್ತೀಯಾ ಎಂದು ಸೀತಾರಾಂ ಪಾಂಡೆ ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ, ಸೀತಾರಾಂ ಪಾಂಡೆ ಸುತ್ತಿಗೆಯಿಂದ ಜಿತೇಂದ್ರ ಪಾಂಡೆಗೆ ಹೊಡೆದಿದ್ದಾನೆ. ಜಿತೇಂದ್ರ ಪಾಂಡೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕೊಲೆ ಮಾಡಿದ ಬಳಿಕ ಸೀತಾರಾಂ ಪಾಂಡೆ ಘಟನಾ ಸ್ಥಳದಿಂದ ಪರಾರಿಯಾಗಿದ್ದನು.

ಜುಲೈ 29 ರಂದು ಉಳಿದ ಕೆಲಸಗಾರರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿ ಪತ್ತೆ ಮಾಡಿ ಬಂಧಿಸಿದ್ದಾರೆ.