ನವದೆಹಲಿ, ಆಗಸ್ಟ್ 5: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಕೇಂದ್ರಕ್ಕೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ಶುಕ್ರವಾರ (ಆಗಸ್ಟ್ 8) ವಿಚಾರಣೆ ನಡೆಸಲಿದೆ. ಅರ್ಜಿದಾರರಾದ ಜಹೂರ್ ಅಹ್ಮದ್ ಭಟ್ ಮತ್ತು ಕಾರ್ಯಕರ್ತ ಖುರ್ಷೈದ್ ಅಹ್ಮದ್ ಮಲಿಕ್ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಆ ದಿನದ ಪ್ರಕರಣದ ಪಟ್ಟಿಯಿಂದ ಈ ವಿಷಯವನ್ನು ತೆಗೆದುಹಾಕಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರನ್ನು ಕೋರಿದ್ದಾರೆ. ಸಿಜೆಐ ಗವಾಯಿ ಈ ಮನವಿಗೆ ಒಪ್ಪಿಕೊಂಡಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ್ದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ನಂತರವೂ ರಾಜ್ಯತ್ವವನ್ನು ಪುನಃಸ್ಥಾಪಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದು ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. “ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವದ ಸ್ಥಾನಮಾನವನ್ನು ಕಾಲಮಿತಿಯೊಳಗೆ ಪುನಃಸ್ಥಾಪಿಸದಿರುವುದು ಭಾರತದ ಸಂವಿಧಾನದ ಮೂಲ ರಚನೆಯ ಭಾಗವಾಗಿರುವ ಒಕ್ಕೂಟ ವ್ಯವಸ್ಥೆಯ ಕಲ್ಪನೆಯನ್ನು ಉಲ್ಲಂಘಿಸುತ್ತದೆ” ಎನ್ನಲಾಗಿದೆ.
ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ಚುನಾವಣೆಗಳು ಶಾಂತಿಯುತವಾಗಿ ನಡೆದಿವೆ. ಜಮ್ಮು-ಕಾಶ್ಮೀರದ ರಾಜ್ಯತ್ವದ ಪುನಃಸ್ಥಾಪನೆಗೆ ಅಡ್ಡಿಯಾಗುವ ಅಥವಾ ತಡೆಯುವ ಯಾವುದೇ ಭದ್ರತಾ ಕಾಳಜಿಗಳು, ಹಿಂಸಾಚಾರ ಅಥವಾ ಇತರ ಯಾವುದೇ ಅಡಚಣೆಗಳಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಡಿಸೆಂಬರ್ 11, 2023ರಂದು 5 ನ್ಯಾಯಾಧೀಶರ ಸಂವಿಧಾನ ಪೀಠವು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ 2019ರ ಕ್ರಮ ಸಾಂವಿಧಾನಿಕವಾಗಿ ಮಾನ್ಯವಾಗಿದೆ ಎಂದು ಎತ್ತಿ ತೋರಿಸಿತ್ತು.

