ನವದೆಹಲಿ: ʻಆಪರೇಷನ್ ಸಿಂಧೂರʼ ಕಾರ್ಯಾಚರಣೆ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ನಿಯೋಗ ನಡೆಸಿದ ಮೊದಲ ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಲಾಯಿತು.

ಸಂಸತ್ ಭವನದಲ್ಲಿ ಇಂದು ನಡೆದ ಸಂಸದೀಯ ಸಭೆಯಲ್ಲಿ, ಆಪರೇಷನ್ ಸಿಂಧೂರ ಯಶಸ್ಸಿಗಾಗಿ ʻಜೈ ಶ್ರೀರಾಮ್, ಹರಹರ ಮಹದೇವ್, ಭಾರತ್ ಮಾತಾಕಿ ಜೈʼ ಎಂಬಿತ್ಯಾದಿ ಘೋಷಣೆಗಳ ನಡುವೆ ಪ್ರಧಾನಿ ಮೋದಿ ಅವರನ್ನ ಸನ್ಮಾನಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನಿಗಳಿಗೆ ಹಾರ ಹಾಕಿ ಗೌರವಿಸಿದರು. ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಎನ್‌ಡಿಎ ಸಂಸದರು ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾದರು.
ನಂತರ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ, ʻಆಪರೇಷನ್ ಸಿಂಧೂರ ಹಾಗೂ ಆಪರೇಷನ್ ಮಹಾದೇವ್ʼ ಯಶಸ್ಸಿನ ಕುರಿತು ನಿರ್ಣಯ ಅಂಗೀಕರಿಸಲಾಯಿತು.
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು.
ಇನ್ನೂ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದು, ಆಗಸ್ಟ್ 15ರಂದು ನಡೆಯಲಿರುವ ತಿರಂಗಾ ಯಾತ್ರೆ, ವಿಪಕ್ಷಗಳ ವಿರುದ್ಧದ ಕಾರ್ಯತಂತ್ರದ ಬಗ್ಗೆಯೂ ಚರ್ಚಿಸುವ ಸಾಧ್ಯತೆಗಳಿವೆ. ಅಲ್ಲದೇ ಆಗಸ್ಟ್ 7ರಿಂದಲೇ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಎನ್‌ಡಿಎ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ

