ಉಪ್ಪುಂದ(ಉಡುಪಿ): ಬೈಂದೂರಿನ ಉಪ್ಪುಂದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ದೋಣಿಯೊಂದು ಮಗುಚಿಬಿದ್ದಿದೆ. ಆ.3ರಂದು ಬೆಳಗ್ಗೆ ಶಾರದಾ ಎಂಬವರ ಮಾಲೀಕತ್ವದ ದೋಣಿಯಲ್ಲಿ ಮೀನುಗಾರರು ಉಪ್ಪುಂದ ಗ್ರಾಮದ ಮೆಡಿಕಲ್ ಕಡಲ ತೀರದಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದರು. ಈ ವೇಳೆ, ಬೃಹತ್ ಅಲೆಗಳು ಹೊಡೆತಕ್ಕೆ ಸಿಕ್ಕಿ ದೋಣಿ ಮಗುಚಿದ್ದು, ಮೀನುಗಾರರು ಸಮುದ್ರಕ್ಕೆ ಬಿದ್ದಿದ್ದಾರೆ. ಆದರೆ, ಮೀನುಗಾರರು ಲೈಫ್ ಜಾಕೆಟ್ ಧರಿಸಿದ್ದರಿಂದ ಅವರಿಗೆ ಈಜಿ ದಡ ಸೇರಲು ಸಾಧ್ಯವಾಗಿದೆ.

ಪ್ರಜ್ವಲ್ ಖಾರ್ವಿ, ಪ್ರಮೋದ್ ಖಾರ್ವಿ, ಗೌತಮ್ ಖಾರ್ವಿ, ಭಾಸ್ಕರ್ ಖಾರ್ವಿ, ಯೋಗಿರಾಜ್ ಖಾರ್ವಿ, ಗೋವಿಂದ ಖಾರ್ವಿ, ಬಾಬು ಖಾರ್ವಿ, ದೀಪಕ್ ಖಾರ್ವಿ ಎಂಬ ಮೀನುಗಾರರು ಈಜಿ ದಡ ಸೇರಿದ್ದಾರೆ. ಸ್ಥಳೀಯರು ಪರ್ಯಾಯ ದೋಣಿ ಮೂಲಕ ಹಗ್ಗ ಬಳಸಿ ದೋಣಿಯನ್ನು ದಡಕ್ಕೆ ತಂದು ಸಮುದ್ರದಲ್ಲಿ ಕೊಚ್ಚಿ ಹೋಗುವುದನ್ನು ತಪ್ಪಿಸಿದ್ದಾರೆ.
ಕಡಲಾರ್ಭಟಕ್ಕೆ ದೋಣಿ ಹಾಗು ಅದರ ಎಂಜಿನ್‌ಗೆ ಹಾನಿಯಾಗಿದೆ. ದೋಣಿಯಲ್ಲಿರುವ ಬಲೆಗಳು ಸಮುದ್ರದಲ್ಲಿ ಕೊಚ್ಚಿ ಹೋಗಿ ನಷ್ಟ ಸಂಭವಿಸಿದೆ.
ಈ ಕುರಿತು ಮಾಹಿತಿ ನೀಡಿದ ಸ್ಥಳೀಯ ಮಹೇಶ್ ಗಾಣಿಗ ಎಂಬವರು, “ಮಳೆಯ ರಭಸ ಕಡಿಮೆಯಿದ್ದ ಕಾರಣ ಕಡಲು ಪ್ರಕ್ಷುಬ್ಧಗೊಂಡಿರಲಿಲ್ಲ. ಗಾಳಿ, ಮಳೆ ಇದ್ದರೆ ಮೀನುಗಾರರ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಹಾಗಾಗಲಿಲ್ಲ. ಮೀನುಗಾರರೆಲ್ಲ ಲೈಫ್ ಜಾಕೆಟ್ ಧರಿಸಿ ಸಮಯ ಪ್ರಜ್ಞೆ ಮೆರೆದು ಈಜಿ ಜೀವ ಉಳಿಸಿಕೊಂಡಿದ್ದಾರೆ” ಎಂದರು.

