ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯ ವೇಳೆ ತಾಯಿ ಮತ್ತು ಮಗು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.

ಚಾಮರಾಜನಗರ ತಾಲೂಕಿನ ಬಸಪ್ಪನಪಾಳ್ಯ ಗ್ರಾಮದ ಭಾಗ್ಯ (30) ಮತ್ತು ನವಜಾತ ಹೆಣ್ಣು ಮಗು ಮೃತಪಟ್ಟಿದೆ.
ಭಾಗ್ಯ ಅವರಿಗೆ ಭಾನುವಾರಕ್ಕೆ ಹೆರಿಗೆ ದಿನಾಂಕ ಕೊಡಲಾಗಿತ್ತು. ಅದರಂತೆ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆಯಲ್ಲಿ ಅವರು ಮೃತಪಟ್ಟಿದ್ದಾರೆ ಸಂಬಂಧಿಕರು ಆರೋಪಿಸಿದ್ದಾರೆ.
ಆರಂಭದಿಂದಲೇ ವೈದ್ಯರು ತಡಮಾಡಿದರು. ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವವಾಗಿ ತಾಯಿ ಮತ್ತು ಮಗುವಿನ ಸಾವು ಸಂಭವಿಸಿದೆ. ಇದಕ್ಕೆ ವೈದ್ಯರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ, ಕುಟುಂಬಸ್ಥರು ಮೃತದೇಹಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದುವರೆಗೆ ಯಾವುದೇ ದೂರು ಅಥವಾ ಪ್ರಕರಣ ದಾಖಲಾಗಿಲ್ಲ.
