ಬೆಂಗಳೂರು: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಗಸ್ಟ್ 5ರಂದು ರಾಜ್ಯಾದ್ಯಾಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಇದ್ದರಿಂದ ಎಚ್ಚೆತ್ತುಕೊಂಡಿರುವ ಎಲ್ಲಾ ಜಿಲ್ಲೆಗಳ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಸರ್ಕಾರಿ ಬಸ್‌ಗಳ ಬದಲು ಖಾಸಗಿ ಬಸ್‌ಗಳನ್ನ ರಸ್ತೆಗಿಳಿಸೋಕೆ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ.

ಹೌದು, ಈ ಹಿಂದೆಯೂ ಸಹ ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದ ಸಾರಿಗೆ ನೌಕರರು ಈಗ ಮತ್ತೆ ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.
ಹೀಗಾಗಿ ಮುಷ್ಕರ ಬೇಡ ಅಂತ ಸಾರಿಗೆ ನೌಕರರ ಸಂಘಟನೆಗಳ ಜೊತೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಆದ್ರೆ ಸಭೆಯಲ್ಲಿ ಸಿಎಂ ನಿರ್ಧಾರ ಏನು ಎಂಬ ಕೂತೂಹಲ ಮನೆ ಮಾಡಿದೆ. ಇನ್ನೂ ಸಂಘಟನೆಯ ಮುಖಂಡರು ಸಹ ಈ ಬಾರಿ ಜೋರಾಗಿಯೇ ಪ್ರತಿಭಟಿಸಿ ಹೋರಾಟ ಮಾಡೋಕೆ ಸಕಲ ತಯಾರಿಗಳನ್ನ ಮಾಡಿಕೊಂಡಿದ್ದಾರೆ.
ಒಂದು ವೇಳೆ ಮಂಗಳವಾರ ಮುಷ್ಕರ ಆರಂಭವಾದರೆ ಸಹಜವಾಗಿಯೇ ಸಾರ್ವಜನಿಕರಿಗೆ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಎಚ್ಚೆತ್ತಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅಂದು ಸಾರಿಗೆ ಬಸ್‌ಗಳ ಬದಲಾಗಿ ಖಾಸಗಿ ವಾಹನಗಳನ್ನ ರಸ್ತೆಗಿಳಿಸೋಕೆ ಪ್ಲಾನ್ ಮಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿನಿತ್ಯ 584 ಬಸ್‌ಗಳು ಸಂಚಾರ ಮಾಡುತ್ತಿದ್ದು, 3400ಕ್ಕೂ ಹೆಚ್ಚು ಟ್ರಿಪ್‌ಗಳನ್ನ ಮಾಡುತ್ತಿದ್ದು ಸಾವಿರಾರು ಮಂದಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನ ಅವಲಂಬಿಸಿದ್ದಾರೆ. ಹೀಗಾಗಿ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದು ಮುಂದಾಲೋಚನೆ ಮಾಡಿರುವ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಈಗಾಗಲೇ ಖಾಸಗಿ ವಾಹನಗಳ ಮಾಲೀಕರ ಜೊತೆ ಸಭೆ ನಡೆಸಿದ್ದಾರೆ.
ಜಿಲ್ಲೆಯಲ್ಲಿರುವ 200ಕ್ಕೂ ಹೆಚ್ಚು ಸ್ಟೇಜ್ ಹಾಗೂ ಕಂಟ್ರ‍್ಯಾಕ್ಟ್ ಕ್ಯಾರೇಜ್ ಖಾಸಗಿ ಬಸ್‌ಗಳನ್ನ ರಸ್ತೆಗಿಳಿಸಲು ಮಾತುಕತೆ ಮಾಡಿದ್ದಾರೆ. ಇದರ ಜೊತೆಗೆ ಜಿಲ್ಲೆಯಲ್ಲಿರುವ 587 ಶಾಲಾ ಬಸ್‌ಗಳನ್ನ ಬಳಸಿಕೊಳ್ಳಲು ಶಾಲೆಗಳ ಮಾಲೀಕರು ಜೊತೆ ಸಮಾಲೋಚನೆ ಮಾಡಿದ್ದಾರೆ. ಮತ್ತೊಂದು ಕಡೆ ಸ್ಥಳೀಯವಾಗಿ ಆಟೋಗಳನ್ನ ಸಹ ಬಳಸಿಕೊಳ್ಳೋಕೆ ನಿರ್ಧಾರ ಮಾಡಲಾಗಿದೆ.
