
ಹೊನ್ನಾವರ ಜು. 28: ಬಂದರದಿಂದ ಕಾಲು ಹಾದಿಯಲ್ಲಿ ತಾಲೂಕಾ ಆಸ್ಪತ್ರೆ ಮತ್ತು ನ್ಯಾಯಾಲಯಕ್ಕೆ ಹೋಗುವ ದಾರಿಯಲ್ಲಿ ಗಿಡಗಂಟಿಗಳು ಬೆಳೆದು ದಾರಿ ಮುಚ್ಚಿ ಹೋಗಿದ್ದು ನಿತ್ಯ 500-600 ಜನ ಹಗಲು-ರಾತ್ರಿ ಎನ್ನದೇ ಓಡಾಡುವ ಕೋರ್ಟ್ ದಾರಿಯಲ್ಲಿ ಮುಂದೆ ಹೋದರೆ ಬೇಗ ಪೇಟೆ ಸೇರಬಹುದಿತ್ತು. ರಿಕ್ಷಾ ಬಾಡಿಗೆ ಹಣ ಉಳಿಯುತ್ತಿತ್ತು. ಆಸ್ಪತ್ರೆಗೆ ಹೋಗುವ ಕಾಲುಹಾದಿಗೆ ಡಾ. ಭಾಸ್ಕರ ಕಾಲದಲ್ಲಿ ಲಯನ್ಸ್ ಕ್ಲಬ್ 117ಮೆಟ್ಟಿಲುಗಳನ್ನು ಕಟ್ಟಿಸಲಾಗಿತ್ತು. ಕೆಲವು ಮೆಟ್ಟಿಲು ಕುಸಿದಿದೆ, ಕಾಡು ಮೆಟ್ಟಿಲನ್ನು ಮುಚ್ಚಿ ಹಾಕಿದೆ. ಈ ಎರಡೂ ಮಾರ್ಗದಲ್ಲಿ ದಾರಿದೀಪಗಳು ಉರಿಯುತ್ತಿಲ್ಲ.
ಶರಾವತಿ ಎಡಬಲದಂಡೆಯಿಂದ ದೋಣಿ ಡಿಂಗಿಯಲ್ಲಿ ಬರುವ ಮತ್ತು ಕಾಸರಕೋಡ್ ಟೊಂಕಾದಿಂದ ಬರುವ ನಾಗರಿಕರಿಗೆ ಈ ಎರಡು ದಾರಿಗಳು ಖರ್ಚಿಲ್ಲದೇ ಗುರಿ ತಲುಪಿಸುತ್ತಿತ್ತು. ಈಗ ರಿಕ್ಷಾಕ್ಕೆ 100 ರೂ. ತೆರಬೇಕಾಗಿದೆ. ಇದೆಲ್ಲ ತಿಳಿದಿದ್ದರೂ ಬೇಡದ ರಾಜಕಾರಣ ಮಾಡುವ ಪ.ಪಂ ಸದಸ್ಯರು ನಾಗರಿಕರ ಮೂಲಸೌಲಭ್ಯದ ಕಡೆ ಗಮನ ಕೊಡುತ್ತಿಲ್ಲ ಎಂದು ಜನ ವಿಷಾದಿಸಿದ್ದಾರೆ. ಬಡ ಕುಟುಂಬದ ಗರ್ಭಿಣಿಯರು, ವೃದ್ಧರು ಈ ಮಾರ್ಗವನ್ನು ಬಳಸುತ್ತಿದ್ದರು. ಪ.ಪಂ ಕಣ್ತೆರೆದು ನೋಡಲಿ ಎಂದು ಜನ ಬಯಸಿದ್ದಾರೆ.


