ಭಟ್ಕಳದಲ್ಲಿ ವಿದೇಶಿ ನಕಲಿ ನೋಟುಗಳು ಪತ್ತೆ – ತನಿಖೆ ಆರಂಭ

ಭಟ್ಕಳ: ಚಲಾವಣೆ ಮಾಡುವ ಉದ್ದೇಶದಿಂದ ನಕಲಿ ವಿದೇಶಿ ನೋಟುಗಳನ್ನು ಇಟ್ಟುಕೊಂಡಿದ್ದ ವ್ಯಕ್ತಿ ಒಬ್ಬನನ್ನು ಭಟ್ಕಳ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೋಂದೆಲ್ ಪದವಿನಂಗಡಿ ನಿವಾಸಿ ರವೀನ್ ಪ್ರಕಾಶ ಐತಪ್ಪ ಪೂಜಾರಿ (44) ಬಂಧಿತ ಆರೋಪಿ.

ಈತನನ್ನು ಜುಲೈ 25ರಂದು ಭಟ್ಕಳ ತಾಲೂಕಿನ ಬಂದರ ರಸ್ತೆಯ ಮೈಸೂರು ಕೆಫೆ ಎದುರಿಗೆ ಬಂಧಿಸಲಾಗಿದೆ. ಈತನ ಬಳಿಯಿದ್ದ ಯುಎಇ ದೇಶದ ನಕಲಿ ದಿರಾಮ್ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಟ್ಕಳ ಶಹರ ಠಾಣೆ ಇನ್ಸೆಕ್ಟರ್ ದಿವಾಕರ ಪಿ ಎಮ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.