ಆನೇಕಲ್: ತಡರಾತ್ರಿ ಎರಡು ಗಂಟೆ ವೇಳೆಗೆ ಏಕಾಏಕಿ ಕಚ್ಚಾ ಮನೆಯೊಂದು ಕುಸಿದು, ಮನೆಯೊಳಗೆ ಸಿಲುಕಿದ್ದ ಯುವತಿಯೊಬ್ಬಳನ್ನು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

ಆನೇಕಲ್ ಬಿಲಾಲ್ ಮಸೀದಿ ಹಿಂಬದಿಯ ಹಳೆಯ ಮನೆ ಮಳೆಗೆ ತೋಯ್ದು ಕುಸಿದಿದೆ. 26 ವರ್ಷದ ಮದೀನಾ ಆಫ್ರಾ ಸ್ನಾನಕ್ಕೆ ಹೋಗಿ ಆಚೆ ಬರುವಾಗಲೇ ಮನೆ ಕುಸಿದಿದೆ. ಮನೆಯಲ್ಲಿ ಒಬ್ಬಳೇ ಇದ್ದ ಮದೀನಾ ಕುಸಿದ ಮನೆಯಲ್ಲಿ ಮಂಚದ ಮೇಲೆ ಬಿದ್ದಿದ್ದಾಳೆ. ಮನೆ ಮೇಲ್ಛಾವಣಿ ಅಲ್ಮೆರಾ ಒಂದರ ಮೇಲೆ ನಿಂತ ಕಾರಣ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೂ ಕಾಲಿಗೆ ಗಂಭೀರ ಗಾಯವಾಗಿದ್ದು, ಯುವತಿಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಆನೇಕಲ್ ಅಗ್ನಿಶಾಮಕ ದಳ, ಎಸ್ಡಿಆರ್ಎಫ್, ಆನೇಕಲ್ ಪೊಲೀಸರು ಎರಡು ಜೆಸಿಬಿ ಸಮೇತ ಆಗಮಿಸಿ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಕುಸಿತಗೊಂಡ ಮನೆಯಲ್ಲಿ ಯುವತಿಯೊಬ್ಬಳೇ ಇದ್ದು, ತಾಯಿ ಪಕ್ಕದ ಇನ್ನೊಂದು ಮನೆಯಲ್ಲಿ ಮಲಗಿದ್ದರಿಂದ ಕುಟುಂಬದ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

