ಕಣ್ಣಿಗೆ ಕಾಣುವುದು ಒಂದೇ, ಹಿನ್ನಲೆ ಮತ್ತೊಂದು? ಧಂಖರ್ ರಾಜೀನಾಮೆ ಕುರಿತು ಕಾಂಗ್ರೆಸ್ ಅನುಮಾನ

ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಖರ್ ಅವರ ರಾಜೀನಾಮೆಗೆ ಆರೋಗ್ಯ ಸಮಸ್ಯೆ ಕಾರಣವಾದರೂ ಅದಕ್ಕಿಂತ ಆಳವಾದ ಕಾರಣ ಇನ್ನೊಂದಿದೆ ಎಂದು ಕಾಂಗ್ರೆಸ್​ ತಿಳಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ವಕ್ತಾರ ಜೈರಾಮ್​ ರಮೇಶ್​, ಅಧಿವೇಶನದ ಮೊದಲ ದಿನದಂದು ಸೋಮವಾರ ನಡೆದ ಎರಡನೇ ವ್ಯವಹಾರ ಸಲಹಾ ಸಮಿತಿಯಿಂದ ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಕಿರಣ್ ರಿಜಿಜು ಗೈರಾಗಿದ್ದರು. ಸೋಮವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4.30 ರ ನಡುವೆ ಏನೋ ಗಂಭೀರ ವಿಚಾರ ಸಂಭವಿಸಿದೆ. ಎರಡನೇ ಬಿಎಸಿಗೆ ಅವರು ಉದ್ದೇಶಪೂರ್ವಕವಾಗಿ ಗೈರುಹಾಜರಾಗಿದ್ದಾರೆ ಎಂದರು.

ಕಾಂಗ್ರೆಸ್​ ರಾಜ್ಯಸಭಾ ಸಂಸದ ವಿವೇಕ್​ ಥಂಕ್​ ಕೂಡ ಧಂಖರ್​ ರಾಜಕೀನಾಮೆ ಅನಿರೀಕ್ಷಿತ ಎಂದಿದ್ದಾರೆ. ನಿನ್ನೆ ರಾಜ್ಯಸಭಾ ಕಲಾಪದ ವೇಳೆ ಅವರು ಖುಷಿಯಾಗಿದ್ದಾರೆ. ನಿನ್ನೆಯ ಎರಡು ಮಹಾಭಿಯೋಗ ಗೊತ್ತುವಳಿಗಳನ್ನು (ನ್ಯಾಯಮೂರ್ತಿ ಯಾದವ್ ಮತ್ತು ವರ್ಮಾ) ಧಂಖರ್​ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರು ಎಂದು ಎಕ್ಸ್​ನಲ್ಲಿ ತಿಳಿಸಿದ್ದಾರೆ.

ಸೋಮವಾರ 12.30ಕ್ಕೆ ರಾಜ್ಯಸಭಾದ ಬಿಎಸಿ ಸಭೆಯ ನೇತೃತ್ವವನ್ನು ಅವರು ವಹಿಸಿದ್ದರು ಎಂದಿದ್ದಾರೆ. ಜೆಪಿ ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಹೆಚ್ಚಿನ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಕೆಲವು ಚರ್ಚೆಯ ನಂತರ ಮತ್ತೆ ಸಂಜೆ 4:30ಕ್ಕೆ ಬಿಎಸಿ ಸಭೆ ನಡೆಸಲು ನಿರ್ಧರಿಸಿತು. ಸಂಜೆ 4.30ಕ್ಕೆ ಧಂಖರ್ ಅವರ ಅಧ್ಯಕ್ಷತೆಯಲ್ಲಿ ಬಿಎಸಿ ಮತ್ತೆ ಸಭೆ ಸೇರಿತು. ಅವರು ನಡ್ಡಾ ಮತ್ತು ರಿಜಿಜುಗಾಗಿ ಕಾದರು. ಆದರೆ, ಅವರು ಬರಲಿಲ್ಲ. ಮಧ್ಯಾಹ್ನ 1 ರಿಂದ 4.30ರವರೆಗೆ ಏನೋ ಗಂಭೀರವಾದ ಪ್ರಕ್ರಿಯೆಗಳು ನಡೆದಿವೆ ಎಂದು ಅನುಮಾನ ವ್ಯಕ್ತಪಡಿಸಿದರು.

ಆರೋಗ್ಯದ ಕಾರಣ ನೀಡಿ ರಾಜೀನಾಮೆ ನೀಡಿದ ಧಂಖರ್​: ಇದೀಗ ತಮ್ಮ ಹುದ್ದೆಗೆ ಆರೋಗ್ಯದ ಕಾರಣ ನೀಡಿ ಅವರು ರಾಜೀನಾಮೆ ನೀಡಿದ್ದಾರೆ. ಅದನ್ನು ನಾವು ಗೌರವಿಸಬೇಕು. ಆದರೆ, ಅವರ ರಾಜೀನಾಮೆ ಹಿಂದೆ ಆಳವಾದ ಕಾರಣಗಳಿರುವುದು ಸತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಧಂಖರ್ ತಮ್ಮ ಹುದ್ದೆಗೆ ದಿಡೀರ್​​ ರಾಜೀನಾಮೆ ನೀಡಿದ್ದ ಬಗ್ಗೆ ಸೋಮವಾರವೇ ವಿಪಕ್ಷಗಳು ಪ್ರಶ್ನೆಗಳನ್ನು ಎತ್ತಿದ್ದರು. ಈ ಅನಿರೀಕ್ಷಿತ ರಾಜೀನಾಮೆ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನದನ್ನೇನೋ ತಿಳಿಸುತ್ತಿದೆ ಎಂದು ಹೇಳಿದ್ದಾರೆ.

ಧಂಖರ್ ಉಪ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ ಬಗ್ಗೆ ವಿರೋಧ ಪಕ್ಷಗಳು ಸೋಮವಾರ ಪ್ರಶ್ನೆಗಳನ್ನು ಎತ್ತಿದ್ದವು. ಕಾಂಗ್ರೆಸ್ “ಅವರ ಅನಿರೀಕ್ಷಿತ ರಾಜೀನಾಮೆಗೆ ಕಣ್ಣಿಗೆ ಬೀಳುವುದಕ್ಕಿಂತ ಹೆಚ್ಚಿನದಿದೆ” ಎಂದು ಸ್ಪಷ್ಟವಾಗಿ ಹೇಳಿದೆ.

ಇದೇ ವೇಳೆ ಧಂಖರ್ ಅವರಿಗೆ ರಾಜೀನಾಮೆ ಹಿಂಪಡೆಯುವಂತೆ ಪ್ರಧಾನಿ ಮೋದಿ ಮನವೋಲಿಸುವಂತೆ ಕಾಂಗ್ರೆಸ್​ ಒತ್ತಾಯಿಸಿದೆ.