ಮನಮೋಹನ್ ಸಿಂಗ್ ನಿಧನ- ಇಂದು ಸರ್ಕಾರಿ ರಜೆ- ರಾಜ್ಯದಲ್ಲಿ 7ದಿನ ಶೋಕಾಚರಣೆ

ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ. ಹಾಗಾಗಿ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಏಳು ದಿನಗಳ ರಾಜ್ಯಾದ್ಯಂತ ಶೋಕಾಚರಣೆ ಮತ್ತು ನಾಳೆ ಸರ್ಕಾರಿ ರಜೆ ಘೋಷಿಸಿದೆ. ನಾಳಿನ ಎಲ್ಲ ಕೇಂದ್ರ ಸರ್ಕಾರಿ ಕಾರ್ಯಕ್ರಮಗಳು ರದ್ದು ಮಾಡಲಾಗಿದೆ. ಗಣ್ಯರ ನಿಧನಕ್ಕೆ ಎಲ್ಲರು ಸಂತಾಪ ಸೂಚಿಸುತ್ತಿದ್ದಾರೆ.

ಬೆಂಗಳೂರು, ಡಿಸೆಂಬರ್​ 26: ಭಾರತದ ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ, ಹಿರಿಯ ಕಾಂಗ್ರೆಸ್​ ನಾಯಕ ಮನಮೋಹನ್​ ಸಿಂಗ್ ಅವರು ಗುರುವಾರ ದೆಹಲಿಯಲ್ಲಿ ವಿಧಿವಶರಾಗಿದ್ದಾರೆ. ಅವರ ನಿಧನ ಹಿನ್ನೆಲೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿ 7 ದಿನಗಳ ಕಾಲ ಶೋಕಾಚರಣೆ ಮತ್ತು ಇಂದು (ಡಿ.27) ಸರ್ಕಾರಿ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಹಿನ್ನಲೆ ಇಂದು ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ಈಗಾಗಲೇ ರದ್ದು ಮಾಡಲಾಗಿದೆ. ಇತ್ತ ಕಾರ್ಯಕ್ರಮ ರದ್ದು ಮಾಡುತ್ತಿದ್ದಂತೆ ಕಾಂಗ್ರೆಸ್​ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಇತರರು ಬೆಳಗಾವಿಯಿಂದ ದೆಹಲಿಗೆ ತೆರಳಿದ್ದಾರೆ.

ಮನಮೋಹನ್​ ಸಿಂಗ್ ನಿಧನಕ್ಕೆ ಡಿಸಿಎಂ ಡಿಕೆ ಶಿವಕುಮಾರ್​ ಸಂತಾಪ

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನಮೋಹನ್​ ಸಿಂಗ್ ಕೊಡುಗೆ ಮರೆಯಲು ಸಾಧ್ಯವಿಲ್ಲ. ನಾಳೆ ಬೆಳಗಾವಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ರದ್ದು ಮಾಡಲಾಗಿದೆ. ವರಿಷ್ಠರ ಜೊತೆ ಚರ್ಚಿಸಿ ಮುಂದೆ ಕಾರ್ಯಕ್ರಮ ಮಾಡುತ್ತೇವೆ. ನಾಳೆ ಸರ್ಕಾರಿ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಒಂದು ವಾರ ಶೋಕಾಚರಣೆ ಆಚರಿಸಲಾಗುತ್ತದೆ. ನಾಳೆ ನಾನು, ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ದೆಹಲಿಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.