ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ: 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ 

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರೆದಿದೆ. ಕಳೆದ ಹಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಇಂದೂ ಕೂಡಾ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಆರೆಂಜ್ ಅಲರ್ಟ್​ ಘೋಷಣೆ ಮಾಡಿದೆ.

ಈ ಎಲ್ಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ: ಇನ್ನು ಮೈಸೂರು, ಮಂಡ್ಯ, ಚಾಮರಾಜನಗರ,ಧಾರವಾಡ, ಬೀದರ್, ಬೆಳಗಾವಿ, ರಾಯಚೂರು, ಕಲಬುರಗಿ, ಹಾವೇರಿ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ತುಮಕೂರು, ರಾಮನಗರ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೊಪ್ಪಳದಲ್ಲಿ ಇಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಆಗಿದೆ ಮಳೆ: ಕಾರವಾರ, ಮಂಗಳೂರು, ಸಿದ್ದಾಪುರ, ಗೋಕರ್ಣ, ಬಂಟ್ವಾಳ, ಮಾಣಿ, ಕುಮಟಾ, ಸುಳ್ಯ, ಶಿರಾಲಿ, ಬೆಳ್ತಂಗಡಿ, ಉಡುಪಿ, ಮಂಕಿ, ಶಕ್ತಿನಗರ, ಕೋಟಾ, ಕದ್ರಾ, ಯಲ್ಲಾಪುರ, ಧರ್ಮಸ್ಥಳ, ಜೋಯ್ಡಾ, ಹೊನ್ನಾವರ, ಕುಂದಾಪುರ, ಭಾಗಮಂಡಲ, ನಾಪೋಕ್ಲು, ಪೊನ್ನಂಪೇಟೆ, ಆಗುಂಬೆ, ಶೃಂಗೇರಿ, ಸೋಮವಾರಪೇಟೆ, ಗೋಕಾಕ್, ಹುಕ್ಕೇರಿ, ರಾಯಚೂರು, ಥೊಂಡೇಬಾವಿ, ಬಾದಾಮಿ, ವಿಜಯಪುರ, ಮುದ್ದೇಬಿಹಾಳ, ಮಾನ್ವಿ, ರೋಣ, ಹಾವೇರಿ, ನರಗುಂದ, ಮುಂಡಗೋಡು, ಗುರುಮಿಟ್ಕಲ್, ಹಿಡಕಲ್, ತಿಪಟೂರು, ಪಾವಗಡ, ಕೊಪ್ಪ, ಸೇಡಬಾಳ, ರಾಯಲ್ಪಾಡು, ಕೊಪ್ಪ, ಕಮ್ಮರಡಿ, ಎಚ್​ಡಿ ಕೋಟೆ, ಮಧುಗಿರಿ, ಹೊನ್ನಾಳಿ, ಹರಪನಹಳ್ಳಿ, ಕೋಲಾರದಲ್ಲಿ ಮಳೆಯಾಗಿದೆ.

ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ, ಸಾಧಾರಣ ಮಳೆ ಸಾಧ್ಯತೆ: ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ನಿನ್ನೆ ಭಾರಿ ಮಳೆಯಾಗಿದ್ದು, ಇಂದು ಸಹ ಮೋಡಕವಿದ ವಾತಾವರಣವಿದೆ. ಈ ಅವಧಿಯಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಇಂದೂ ಕೂಡ ಸಾಧಾರಣ ಮಳೆ ಬೀಳುವ ಸಾಧ್ಯತೆ ಎಂದು ಇಲಾಖೆ ತಿಳಿಸಿದೆ.

ನಗರದ ಉಷ್ಣಾಂಶದ ವಿವರ ಹೀಗಿದೆ: ನಗರದಲ್ಲಿ 26.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಎಚ್​ಎಎಲ್​ನಲ್ಲಿ 27.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 28.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.