ಲಿವ್-ಇನ್ ಸಂಬಂಧದ ದುರಂತ: CRPF ಯೋಧನಿಂದ ಮಹಿಳಾ ಪೊಲೀಸ್ ಅಧಿಕಾರಿಯ ಕೊಲೆ

ಕಚ್ (ಗುಜರಾತ್), ಜುಲೈ 20:
ಗುಜರಾತ್‌ನ ಕಚ್ ಜಿಲ್ಲೆಯ ಅಂಜರ್ ಪಟ್ಟಣದಲ್ಲಿ, ಲಿವ್-ಇನ್ ಸಂಬಂಧದ ನಡುವೆ ಉಂಟಾದ ಜಗಳ ದುರಂತವಾಗಿ ಪರಿಣಮಿಸಿದ್ದು, ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಪ್ರೇಮಿ ಮತ್ತು ಸಿಆರ್‌ಪಿಎಫ್ ಯೋಧನಾಗಿರುವ ದಿಲೀಪ್ ಎಂಬಾತ ಶನಿವಾರ ತಡರಾತ್ರಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಮೃತ ಮಹಿಳೆ ಅರುಣಾಬೆನ್ ನಟುಭಾಯ್ ಜಾದವ್ (25) ಅಂಜರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆರೋಪಿಯಾಗಿರುವ ದಿಲೀಪ್ ಮಣಿಪುರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶನಿವಾರ ರಾತ್ರಿ ದಿಲೀಪ್ ಹಾಗೂ ಅರುಣಾಬೆನ್ ನಡುವೆ ತೀವ್ರ ಜಗಳ ಸಂಭವಿಸಿದ್ದು, ಜಗಳದ ವೇಳೆ ಅರುಣಾ, ದಿಲೀಪ್ ತಾಯಿ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾಳೆ. ಇದರಿಂದ ಕೋಪಗೊಂಡ ದಿಲೀಪ್, ಅರುಣಾ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ನಡೆದ ಬಳಿಕ ಆರೋಪಿಯು ತಾನೇ ನೇರವಾಗಿ ಅಂಜರ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪ್ರಕರಣವನ್ನು ದೃಢಪಡಿಸಿರುವ ಡಿವೈಎಸ್‌ಪಿ ಮುಖೇಶ್ ಚೌಧರಿ, “ಆರೋಪಿಯು ಲಿವ್-ಇನ್ ಸಂಪರ್ಕದಲ್ಲಿದ್ದ ಮಹಿಳಾ ಅಧಿಕಾರಿಯನ್ನು ಹತ್ಯೆ ಮಾಡಿರುವುದನ್ನು ಪ್ರಾಥಮಿಕ ತನಿಖೆಯಲ್ಲಿ ಖಚಿತಪಡಿಸಲಾಗಿದೆ. ಪ್ರಕರಣದ ಎಲ್ಲಾಂಶಗಳನ್ನೂ ಚರ್ಚಿಸಿ, ವಿವರವಾದ ತನಿಖೆ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.

2021ರಿಂದ ಲಿವ್-ಇನ್ ಸಂಪರ್ಕ:

ದಿಲೀಪ್ ಮತ್ತು ಅರುಣಾ 2021ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದು, ಆಗಿನಿಂದಲೂ ಲಿವ್-ಇನ್ ಸಂಬಂಧದಲ್ಲಿದ್ದರು. ಮದುವೆಯ ಯೋಜನೆಯಲ್ಲಿದ್ದ ಈ ಜೋಡಿ, ಇತ್ತೀಚೆಗೆ ಮನೆಯವರ ಒಪ್ಪಿಗೆ ಪಡೆದುಕೊಳ್ಳಲು ಯತ್ನಿಸುತ್ತಿದ್ದರು ಎಂಬ ಮಾಹಿತಿ ಲಭಿಸಿದೆ. ಆದರೆ ಪುನಃಪುನಃ ಉಂಟಾಗುವ ಅಹಿತಕರ ಜಗಳಗಳು ಅವರ ನಡುವೆ ಅಳುವು ಮೂಡಿಸಿವೆ.