
ಕೊಪ್ಪಳ, ಜುಲೈ 20: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಸಂಭವಿಸಿದ್ದ ಭಾರಿ ಹಗರಣದ ನಂತರ, ಇದೀಗ ಕೊಪ್ಪಳದ ಕೆಆರ್‌ಐಡಿಎಲ್ ನಲ್ಲೂ ಅದೇ ರೀತಿಯ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಕೊಪ್ಪಳ ಲೋಕಾಯುಕ್ತ ಕಚೇರಿಯಲ್ಲಿ ಅಧಿಕೃತ ದೂರು ದಾಖಲಿಸಲಾಗಿದೆ.
2019ರಿಂದ 2025ರವರೆಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರಿನ ಯೋಜನೆ ಸೇರಿ 96 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಆದರೆ, ಪೂರ್ಣಗೊಂಡಿಲ್ಲದ ಅಥವಾ ನಡೆಯದೇ ಇರುವ ಕಾಮಗಾರಿಗಳಿಗೂ ಬಿಲ್ ಪಾವತಿ ಮಾಡಲಾಗಿದ್ದು, ಒಟ್ಟು 72 ಕೋಟಿ ರೂ. ಸರ್ಕಾರಿ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದೆ.
ಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ಅವರ ನಿರ್ದೇಶನದಂತೆ, ಕೊಪ್ಪಳ ವಿಭಾಗದ ಕಾರ್ಯನಿರ್ವಹಣಾಧಿಕಾರಿ ಅನಿಲ್ ಪಾಟೀಲ್ ಮತ್ತು ನೆಲೋಗಿಪುರ ಉಪವಿಭಾಗದ ಇಇ ಆನಂದ ಕಾರ್ಲಕುಂಟಿ ಲೋಕಾಯುಕ್ತ ಕಚೇರಿಗೆ ತೆರಳಿ, ತದಿನಂತರ ಶಂಕಿತ ಅಧಿಕಾರಿಗಳಾದ ಜಡ್ ಎಂ ಚಿಂಚೋಳಿಕರ್ (ಅಂದಿನ ಇಇ) ಹಾಗೂ ಹೊರಗುತ್ತಿಗೆ ನೌಕರ ಕಳಕಪ್ಪ ನಿಡಗುಂದಿ ವಿರುದ್ಧ ದೂರು ನೀಡಿದ್ದಾರೆ.
ದಾಖಲೆಯ ಪ್ರಕಾರ, ಕೆಲಸ ಪೂರ್ಣಗೊಳ್ಳದೇ ಇರುವಾಗಲೇ ಬಿಲ್ ಪಾವತಿ ಮಾಡಲಾಗಿದ್ದು, ಕಾಮಗಾರಿ ವಿವರ, ಟೆಂಡರ್ ದಿನಾಂಕ, ಮೊತ್ತ, ಪ್ರಗತಿಯ ಸ್ಥಿತಿ, ಹಾಗೂ ಬಾಕಿ ಉಳಿದಿರುವ ಕೆಲಸಗಳ ಬಗ್ಗೆ ವಿವರ ನೀಡಲಾಗಿದೆ. ಒಟ್ಟು 13 ಅಂಶಗಳ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲನೆಗೆ ಪಡೆದುಕೊಂಡಿದ್ದಾರೆ.
ಝಡ್ ಎಂ ಚಿಂಚೋಳಿಕರ್ ಅವರನ್ನು ಈ ಹಿಂದೆಯೇ ಸರ್ಕಾರ ಸಸ್ಪೆಂಡ್ ಮಾಡಿದ್ದರೂ, ಈಗ ದಾವಣಗೆರೆ ವಿಭಾಗ 2ರಲ್ಲಿ ಮತ್ತೆ ಕಾರ್ಯನಿರ್ವಹಣೆಗೆ ನೇಮಿಸಲಾಗಿದೆ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಮತ್ತೆ ನಿರ್ವಹಣಾತ್ಮಕ ಹುದ್ದೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಎಬ್ಬಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಿದ್ದಾರೆ.

