ಕೈಗಾ ಸಿಎಸ್‌ಆರ್ ಅಡಿಯಲ್ಲಿ ನಿರ್ಮಿತ ಶಾಲಾ ಕಟ್ಟಡ, ಸಮುದಾಯ ಭವನ ಉದ್ಘಾಟನೆ

ಕಾರವಾರ: ತಾಲೂಕಿನ ಕೈಗಾದಲ್ಲಿರುವ ಅಣು ವಿದ್ಯುತ್ ಕೇಂದ್ರದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ತಲಾ 70 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿರುವ ಶಾಲಾ ಕಟ್ಟಡ ಹಾಗೂ ಸಮುದಾಯ ಭವನವನ್ನು ಭಾರತೀಯ ಅಣು ವಿದ್ಯುತ್ ನಿಗಮದ ಪುನರ್ವಸತಿ ಮತ್ತು ಪುನರ್‌ಸ್ಥಾಪನೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಅರುಣಕುಮಾರ್ ರಜಪೂತ್ ಶುಕ್ರವಾರ ಉದ್ಘಾಟಿಸಿದರು.

ಕೈಗಾ ಅಣು ವಿದ್ಯುತ್ ಕೇಂದ್ರದ ಸಿಎಸ್‌ಆರ್ ನಿಧಿಯಲ್ಲಿ ತಾಲೂಕಿನ ಕದ್ರಾ ಗ್ರಾಮದಲ್ಲಿ ಸುಮಾರು 70 ಲಕ್ಷ ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಹಾಗೂ ಗೋಟೆಗಾಳಿಯಲ್ಲಿ ಸುಮಾರು 70 ಲಕ್ಷ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗಿತ್ತು. ಈ ಎರಡೂ ನೂತನ ಕಟ್ಟಡಗಳನ್ನ ಮುಂಬೈನಿಂದ ಇಲ್ಲಿಗೆ ಆಗಮಿಸಿದ್ದ ಅರುಣಕುಮಾರ್ ರಜಪೂತ್ ಅವರು ಉದ್ಘಾಟಿಸಿ, ಗುಣಮಟ್ಟದ ನಿರ್ಮಾಣ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೈಗಾ ಅಣು ವಿದ್ಯುತ್ ಕೇಂದ್ರ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಜನಪರ ಕಾರ್ಯಚಟುವಟಿಕೆಗಳನ್ನು ಉತ್ತಮವಾಗಿ ಅನುಷ್ಠಾನ ಮಾಡುತ್ತಿದೆ. ಇಲ್ಲಿನ ಅಧಿಕಾರಿಗಳು ಕೂಡ ಉತ್ತಮ ಗುತ್ತಿಗೆದಾರರ ಮೂಲಕ ರಾಜಿ ಇಲ್ಲದ ಕಟ್ಟಡ ಕಾಮಗಾರಿಗಳನ್ನು ಮಾಡಿಸಿದ್ದಾರೆ. ಸಾರ್ವಜನಿಕರು ಕೈಗಾ ಅಣು ವಿದ್ಯುತ್ ಕೇಂದ್ರಕ್ಕೆ ಸಹಕಾರ ನೀಡಬೇಕು. ಇಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಇನ್ನುಮುಂದೆ ಸೃಷ್ಟಿಯಾಗಲಿದೆ. ಕೇಂದ್ರ ಕೂಡ ಸಾರ್ವಜನಿಕರೊಂದಿಗೆ ಯಾವತ್ತೂ ಇದೆ ಎಂದು ಅವರು ಈ ವೇಳೆ ಹೇಳಿದರು. ನೂತನ ಕಟ್ಟಡಗಳ ಉದ್ಘಾಟನೆಯ ಬಳಿಕ ಗೋಟೆಗಾಳಿಯ ಚಿಟ್ಟೆ ಪಾರ್ಕ್ ವೀಕ್ಷಿಸಿದ ಅವರು, ಬಳಿಕ ಅಧಿಕಾರಿಗಳ ಸಭೆ ನಡೆಸಿ ತೆರಳಿದರು.

ಈ ಸಂದರ್ಭದಲ್ಲಿ ಕೈಗಾ ಸ್ಥಳ ನಿರ್ದೇಶಕ ರಾಜೇಂದ್ರಕುಮಾರ ಗುಪ್ತಾ, ಕೈಗಾ 1 ಮತ್ತು 2ನೇ ಕೇಂದ್ರದ ನಿರ್ದೇಶಕ ಪಿ.ಜಿ.ರಾಯಚೂರ, 3 ಮತ್ತು 4ನೇ ಕೇಂದ್ರದ ನಿರ್ದೇಶಕ ಬಿ.ವಿನೋದಕುಮಾರ್, 5 ಮತ್ತು 6ನೇ ಕೇಂದ್ರದ ಯೋಜನಾ ನಿರ್ದೇಶಕ ಬಿ.ಕೆ.ಚೆನ್ನಕೇಶವ, ಕೈಗಾ ಸಿಎಸ್‌ಆರ್ ಸಮಿತಿ ಅಧ್ಯಕ್ಷ ಆರ್.ವಿ.ಮನೋಹರ, ಮಾನವ ಸಂಪನ್ಮೂಲ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕಿ ಸುವರ್ಣಾ ಗಾಂವಕರ್ ಸೇರಿದಂತೆ ಮುಂತಾದವರಿದ್ದರು.