ಜಡೇಜಾ ಸಾರ್ವಕಾಲಿಕ ದಾಖಲೆ: ವಿಶ್ವದ ಮೊದಲ ಕ್ರಿಕೆಟಿಗನಾಗಿ ಅಪರೂಪದ ಸಾಧನೆ! 

Ravindra Jadeja Test Record: ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್​ ಪಂದ್ಯ ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿದೆ. ಈಗಾಗಲೇ ಮೂರು ದಿನದಾಟ ಮುಕ್ತಾಯಗೊಂಡಿದ್ದು ಎರಡೂ ತಂಡಗಳ ಮೊದಲ ಇನ್ನಿಂಗ್ಸ್​ ಮುಕ್ತಾಯಗೊಂಡಿದೆ. ಇದೀಗ ಇಂಗ್ಲೆಂಡ್​ ತಂಡ ಎರಡನೇ ಇನ್ನಿಂಗ್ಸ್​ ಆರಂಭಿಸಿದೆ. ಮೂರನೇ ದಿನವಾದ ನಿನ್ನೆ ಭಾರತ ತಂಡ ಕೆಎಲ್​ ರಾಹುಲ್ ಅವರ ಶತಕ, ರಿಷಭ್​ ಪಂತ್​ ಮತ್ತು ಜಡೇಜಾ ಅವರ ಅರ್ಧಶತಕ ಸಹಾಯದಿಂದ 387 ರನ್​ಗಳಿಗೆ ಆಲೌಟ್​ಆಗುವ ಮೂಲಕ ಎರಡೂ ತಂಡಗಳು ಸ್ಕೋರ್ ಲೆವೆಲ್​ ಆಯ್ತು. ಇದರಿಂದಾಗಿ ಇಂಗ್ಲೆಂಡ್​ ವಿರುದ್ಧ ಭಾರತ​ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ​

ಆದರೆ ಆಲ್​ರೌಂಡರ್​ ರವೀಂದ್ರ ಜಡೇಜಾ ಅರ್ಧಶತಕ ಸಿಡಿಸಿ ವಿಶ್ವ ದಾಖಲೆಯನ್ನು ಬರೆದರು. ಇದರೊಂದಿಗೆ ಅಪರೂಪದ ದಾಖಲೆಗಳಲ್ಲಿ ತಮ್ಮ ಹೆಸರಿಗೆ ಸೇರಿಸಿಕೊಂಡರು. ಇಷ್ಟಕ್ಕೆ ಜಡೇಜಾ ಬರೆದ ದಾಖಲೆ ಯಾವುದು ಎಂದು ಇದೀಗ ತಿಳಿಯೋಣ.

ಮೂರನೇ ದಿನದಂದು, ಟೀಮ್ ಇಂಡಿಯಾ ಸತತ ಎರಡು ವಿಕೆಟ್‌ಗಳನ್ನು ಕಳೆದುಕೊಂಡಾಗ, ಜಡೇಜಾ ಬ್ಯಾಟಿಂಗ್‌ಗೆ ಆಗಮಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದಾಗ್ಯೂ, ಅರ್ಧಶತಕವನ್ನು ಪೂರ್ಣಗೊಳಿಸಿದ ನಂತರ, ಶತಕದತ್ತ ಸಾಗುತ್ತಿದ್ದ ಜಡೇಜಾ ಅವರನ್ನು ಕ್ರಿಸ್ ವೋಕ್ಸ್ 72 ರನ್‌ಗಳಿಗೆ ಔಟ್ ಮಾಡಿದರು. ಇದರೊಂದಿಗೆ, ಜಡ್ಡು ಶತಕ ವಂಚಿತರಾದರು. ಆದಾಗ್ಯೂ, ಜಡೇಜಾ ಅಪರೂಪದ ದಾಖಲೆ ನಿರ್ಮಿಸಿದರು.

ಏಕೈಕ ಆಟಗಾರನಾಗಿ ದಾಖಲೆ: ಜಡ್ಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ತಮ್ಮ ಈ ಅರ್ಧಶತಕದೊಂದಿಗೆ, ಜಡೇಜಾ WTC ಪಂದ್ಯಾವಳಿಗಳಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದು WTCಯಲ್ಲಿ ಜಡೇಜಾ ಅವರ 15ನೇ ಅರ್ಧಶತಕವಾಗಿದೆ. ಜೊತೆಗೆ ಬೌಲಿಂಗ್​ನಲ್ಲೂ 130 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 2000+ ರನ್‌ಗಳು, 15 ಅರ್ಧಶತಕಗಳು ಮತ್ತು 130 ವಿಕೆಟ್‌ಗಳನ್ನು ಪಡೆದ ಏಕೈಕ ಆಟಗಾರ ಎಂಬ ದಾಖಲೆಯನ್ನು ಜಡೇಜಾ ಸೃಷ್ಟಿಸಿದ್ದಾರೆ.

ಈ ಸರಣಿಯಲ್ಲಿ, ಜಡೇಜಾ ಒಟ್ಟು 5 ಇನ್ನಿಂಗ್ಸ್‌ಗಳಲ್ಲಿ 88ರ ಸರಾಸರಿಯಲ್ಲಿ 266 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ಬೌಲಿಂಗ್‌ನಲ್ಲಿ 3 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟಾರೆಯಾಗಿ, ಟೆಸ್ಟ್‌ನಲ್ಲಿ 83 ಪಂದ್ಯಗಳಲ್ಲಿ 3636 ರನ್‌ಗಳನ್ನು ಗಳಿಸಿದ್ದು, ಇದರಲ್ಲಿ 25 ಅರ್ಧಶತಕಗಳು ಮತ್ತು 4 ಶತಕಗಳು ಸೇರಿವೆ. ಬೌಲಿಂಗ್‌ನಲ್ಲಿ 326 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮೊದಲ ಇನ್ನಿಂಗ್ಸ್​ ಹೈಲೈಟ್​: ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ್ದ ಇಂಗ್ಲೆಂಡ್​ ತಂಡ ಜೋ ರೂಟ್​ (104) ಶತಕ, ಜೇಮಿ ಸ್ಮಿತ್ (51) ಮತ್ತು ಬ್ರೈಡನ್​ ಕಾರ್ಸ್ (56) ಅರ್ಧಶತಕದ ಸಹಾಯದಿಂದಾಗಿ ಇಂಗ್ಲೆಂಡ್​ ತಂಡ 387 ರನ್​ಗಳಿಗೆ ಆಲೌಟ್​ ಆಗಿತ್ತು. ಭಾರತದ ಪರ ಬುಮ್ರಾ 5 ವಿಕೆಟ್​ ಪಡೆದರೇ, ಸಿರಾಜ್​ ಮತ್ತು ನಿತೀಸ್​ ರೆಡ್ಡಿ ತಲಾ 2, ಜಡೇಜಾ​ 1 ವಿಕೆಟ್​ ಪಡೆದಿದ್ದಾರೆ.

ಭಾರತ ಕೂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 387ರನ್​ ಗಳಿಸಲಷ್ಟೇ ಶಕ್ತವಾಯ್ತು. ಕೆಎಲ್ ರಾಹುಲ್​ (100) ಅವರ ಶತಕ, ಪಂತ್​ (74) ಮತ್ತು ಜಡೇಜಾ (72) ಅರ್ಧಶತಕ ಸಿಡಿಸಿದರು. ಇಂಗ್ಲೆಂಡ್​ ಪರ ಕ್ರಿಸ್​ ವೋಕ್ಸ್​ 3, ಆರ್ಚರ್​, ಸ್ಟೋಕ್ಸ್ ತಲಾ 2, ಬಶೀರ್​ ಮತ್ತು ಕಾರ್ಸ್​ ತಲಾ ಒಂದು ವಿಕೆಟ್​ ಪಡೆದರು.