ತೀರ್ಥಹಳ್ಳಿಯಲ್ಲಿ ಭೂಕುಸಿತದ ಭೀತಿ – ಭಾರತೀಪುರ ಫ್ಲೈಓವರ್ ಭಾಗ ತಾತ್ಕಾಲಿಕ ಬಂದ್

ತೀರ್ಥಹಳ್ಳಿ: ಕೋಟಿ ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಯಾಗಿದ್ದ ಭಾರತೀಪುರ ಫೈ ಓವರ್ ನ ಒಂದು ಭಾಗ ಸಂಚಾರ ಬಂದ್ ಮಾಡಲಾಗಿದೆ. ಶಿವಮೊಗ್ಗ ದಿಂದ ತೀರ್ಥಹಳ್ಳಿ ಕಡೆ ಬರುವಾಗ ಎಡ ಭಾಗದಲ್ಲಿ ಬ್ಯಾರಿಕೆಡ್ ಹಾಕಿ ಸಂಚಾರ ಬಂದ್ ಮಾಡಲಾಗಿದ್ದು ಧರೆ ಕುಸಿಯುವ ಭೀತಿಯಿಂದ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.

ಮಳೆಗಾಲ ಸಂದರ್ಭದಲ್ಲಿ ಎಲ್ಲೆಡೆ ಭೂ ಕುಸಿತ, ಧರೆ ಕುಸಿತ ಆಗುತ್ತದೆ. ಆದರೆ ಭಾರತೀಪುರದಲ್ಲಿ ಧರೆ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಹಾಗೂ ಗುತ್ತಿಗೆದಾರರೇ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಮಳೆಗಾಲದಲ್ಲಿ ಕುಸಿಯುತ್ತದೆ ಎಂಬ ಪರಿಜ್ಞಾನ ಸಹ ಇಲ್ಲದೆ ಇಲ್ಲಿಯವರೆಗೆ ಗುಡ್ಡಕುಸಿಯುವುದನ್ನು ತಡೆಯಲು ಪ್ರಯತ್ನ ಸಹ ಮಾಡಿಲ್ಲ. ಈಗ ಕುಸಿದು ಬಿದ್ದರೆ ತಕ್ಷಣ ಅದರಿಂದ ತುರ್ತು ಕಾಮಗಾರಿ ಎಂದು ಮತ್ತೆ ಬಿಲ್ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

ಈ ಮಧ್ಯೆ ಕುಡುಮಲ್ಲಿಗೆಯಿಂದ ಕೂಗಳತೆ ದೂರದಲ್ಲಿ ಮತ್ತೊಂದು ರಸ್ತೆ ಮಾಡುತ್ತಿದ್ದು ಅದು ಚಿಟ್ಟೆಬೈಲು ಸಂಪರ್ಕ ಮಾಡುತ್ತದೆ ಎನ್ನಲಾಗುತ್ತಿದೆ. ಈಗಾಗಲೇ ಅದಕ್ಕೆ ಜಲ್ಲಿ ಕಲ್ಲು ಸಹ ಹಾಕಲಾಗಿದೆ. ಅದಕ್ಕೆ ಕಾರಣ ಒಂದು ವೇಳೆ ಗುಡ್ಡ ಕುಸಿತ ದೊಡ್ಡ ಮಟ್ಟದಲ್ಲಿ ಆದರೆ ಪರ್ಯಾಯ ಮಾರ್ಗ ಎಂಬ ಮಾತು ಕೇಳಿ ಬಂದಿದೆ. ಇವರ ಕೆಲಸ ನೋಡುತ್ತಿದ್ದರೆ ಗುಡ್ಡ ಕುಸಿಯುವುದನ್ನೇ ಅಧಿಕಾರಿಗಳು ಕಾಯುತ್ತಿದ್ದಾರಾ? ಎಂಬುದಾಗಿ ಸಾರ್ವಜನಿಕರು ಪ್ರೆಶ್ನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇದೇ ತರ ಮಳೆ ಜಾಸ್ತಿ ಆದರೆ ಭಾರತೀಪುರ ಫೈ ಓವರ್ ಮುಚ್ಚುತ್ತದೆಯೇ ಎಂಬ ಪ್ರೆಶ್ನೆ ಉದ್ಭವವಾಗಿದೆ.