ವಿಟಮಿನ್‌ ಡ್ರಾಪ್ ಬಳಿಕ ಅಂಗನವಾಡಿ ಮಕ್ಕಳ ಅಸ್ವಸ್ಥತೆ – ಶಾಸಕ ಗೋಪಾಲಕೃಷ್ಣ ಭೇಟಿ

ಶಿವಮೊಗ್ಗ: ಅಂಗನವಾಡಿಯಲ್ಲಿ ಮಕ್ಕಳ ಬೆಳವಣಿಗೆಗೆ ಎಂದು ನೀಡಿದ್ದ ವಿಟಮಿನ್ ಡ್ರಾಪ್ ಸೇವಿಸಿ‌ದ 13 ಮಕ್ಕಳು ಅಸ್ವಸ್ಥರಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಹಿರೇಸಾನಿ ಗ್ರಾಮದ ಅಂಗನವಾಡಿ ಮಕ್ಕಳಿಗೆ ಗುರುವಾರ ವಿಟಮಿನ್​ ಡ್ರಾಪ್​ ಅನ್ನು ನೀಡಲಾಗಿದೆ. ಈ ಡ್ರಾಪ್​ ಸೇವಿಸಿದ ಮಕ್ಕಳು ಮನೆಗೆ ತೆರಳಿದ ಬಳಿಕ ವಾಂತಿ ಮತ್ತು ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. ಸಂಜೆಯೇ ಇವರೆಲ್ಲರನ್ನೂ ರಿಪ್ಪನ್ ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಬಳಿಕ ಕೆಲ‌ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದ ಹಿನ್ನೆಲೆಯಲ್ಲಿ, ಚೇತರಿಕೆ ಕಂಡು ಬಂದ ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಲಾಗಿದೆ.

13 ಮಕ್ಕಳು ಮೆಗ್ಗಾನ್​​ ಗೆ ಶಿಫ್ಟ್​, ಚೇತರಿಕೆ: ಆದರೆ, 13 ಮಕ್ಕಳಲ್ಲಿ ಹೊಟ್ಟೆ‌‌ ನೋವಿನ ಸಮಸ್ಯೆ ಮುಂದುವರೆದ ಹಿನ್ನೆಲೆ ಇವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ನಿನ್ನೆ ರಾತ್ರಿ ದಾಖಲಿಸಲಾಗಿದ್ದು, ಚೇತರಿಸಿಕೊಂಡಿದ್ದಾರೆ. ಸದ್ಯ ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ವೈದ್ಯರು: ಅಂಗನವಾಡಿ ಮಕ್ಕಳು ಅಸ್ವಸ್ಥತೆ ಉಂಟಾದ ಸುದ್ದಿ ತಿಳಿದ ಶಾಸಕ ಗೋಪಾಲಕೃಷ್ಣ, ತಕ್ಷಣಕ್ಕೆ ಮಕ್ಕಳನ್ನು
ರಿಪ್ಪನಪೇಟೆಯಿಂದ ಶಿವಮೊಗ್ಗಕ್ಕೆ ರವಾನೆ ಮಾಡಲು ಖಾಸಗಿ ಅಂಬ್ಯುಲೆನ್ಸ್ ವ್ಯವಸ್ಥೆ‌ ಮಾಡಿದ್ದರು. ಬಳಿಕ ರಾತ್ರಿ ತಾವೇ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ಜು ವಿಚಾರಿಸಿದರು. ಈ ವೇಳೆ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಡಿಹೆಚ್ಓ ಹಾಗೂ ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಮಕ್ಕಳ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಅಂಗನವಾಡಿಯಲ್ಲಿ ನೀಡಿದ ವಿಟಮಿನ್ ಡ್ರಾಪ್ ತೆಗೆದುಕೊಂಡ ನಂತರ ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ‌ ಕಾಣಿಸಿಕೊಂಡಿದೆ. ಮಕ್ಕಳನ್ನು ತಕ್ಷಣ ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ನಾನು ಡಿಹೆಚ್ಓ ಜೊತೆ ಬಂದು ಆಸ್ಪತ್ರೆಯಲ್ಲಿ‌ ಪರಿಶೀಲನೆ ನಡೆಸಿದ್ದೇನೆ. ಮಕ್ಕಳು ಸದ್ಯಕ್ಕೆ ಆರೋಗ್ಯವಾಗಿದ್ದಾರೆ. ಇದು ಅಂಗನವಾಡಿಯಲ್ಲಿ ನೀಡಿದ ಡ್ರಾಪ್ ಅಥವಾ ನೀರಿನಿಂದಲೂ ಅಥವಾ ಅಲ್ಲಿ ನೀಡುವ ಆಹಾರದಿಂದಲೂ ಹೀಗೆ ಆಗಬಹುದು. ಈ ಘಟನೆ ಯಾವ ಕಾರಣಕ್ಕೆ ನಡೆದಿದೆ ಎಂದು ತಿಳಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.