ʼಕೆಡಿ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಬಾಲಿವುಡ್ ಬಗ್ಗೆ ಸಂಜಯ್ ದತ್ ಬೇಸರ

‘ಕೆಡಿ’ ಸಿನಿಮಾದ  ಟೀಸರ್ ಲಾಂಚ್ ಕಾರ್ಯಕ್ರಮ ಹೈದರಾಬಾದ್​ನಲ್ಲಿ ಅದ್ದೂರಿಯಾಗಿ ನಡೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ‘ಜೋಗಿ’ ಪ್ರೇಮ್ ನಿರ್ದೇಶನ ಇದೆ. ಧ್ರುವ ಸರ್ಜಾ ಅವರು ಈ ಚಿತ್ರಕ್ಕೆ ಹೀರೋ. ಈ ಸಿನಿಮಾದ ಟೀಸರ್ ಲಾಂಚ್ ವೇಳೆ ಸಂಜಯ್ ದತ್ ಅವರು ದಕ್ಷಿಣ ಭಾರತ ಚಿತ್ರರಂಗವನ್ನು ಹೊಗಳಿದ್ದಾರೆ. ಜೊತೆಗೆ ಬಾಲಿವುಡ್​ನವರು ಸಿನಿಮಾ ಮೇಲಿರೋ ಪ್ಯಾಷನ್ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

‘ತೆಲುಗು ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಿನಿಮಾ ಬಗ್ಗೆ ಪ್ಯಾಷನ್ ಇದೆ. ಆದರೆ, ಅದನ್ನು ಬಾಲಿವುಡ್ ಕಳೆದುಕೊಂಡಿದೆ. ನಾನು ನಂಬರ್​ನ ಬೆನ್ನು ಹತ್ತಿ ಹೋಗುತ್ತಿಲ್ಲ. ಒಳ್ಳೆಯ ಸಿನಿಮಾ ಮಾಡಬೇಕು. ನನಗೆ ಒಳ್ಳೆಯ ಸಿನಿಮಾಗಳು ಬಾಲಿವುಡ್​ನಲ್ಲಿ ಕಾಣಿಸುತ್ತಿಲ್ಲ’ ಎಂದು ಸಂಜಯ್ ದತ್ ಹೇಳಿದ್ದಾರೆ.

‘ಧರ್ಮೇಂದ್ರ, ಅಮಿತಾಭ್ ಬಚ್ಚನ್, ಸಂಜೀವ್ ಕುಮಾರ್, ದಿಲೀಪ್ ಕುಮಾರ್ ಮೊದಲಾದವರ ಜೊತೆ ನಾನು ನಟಿಸಿದ್ದೇನೆ. ಆಗಿನ ಕಾಲದಲ್ಲಿ ಕಥೆ ಹಾಗೂ ಚಿತ್ರಕಥೆಯೇ ಎಲ್ಲವೂ ಆಗಿತ್ತು. ಆದರೆ, ಇಂದು ಸಿನಿಮಾದ ಕಥೆ ಬರೆಯೋ ಬದಲು ನಂಬರ್​ಗಳನ್ನು (ಕಲೆಕ್ಷನ್) ಪೇಪರ್​ಮೇಲೆ ಬರೆಯಲಾಗುತ್ತಿದೆ. ಈ ಬದಲಾವಣೆ ನನಗೆ ಆತಂಕ ತಂದಿದೆ’ ಎಂದಿದ್ದಾರೆ ಅವರು.

ಇತ್ತೀಚೆಗೆ ಸಂಜಯ್ ದತ್​ಗೆ ಬಾಲಿವುಡ್​ನಿಂದ ಹೆಚ್ಚು ಆಫರ್​ಗಳು ಬರುತ್ತಿಲ್ಲ. ಈ ಕಾರಣಕ್ಕೆ ಅವರು ದಕ್ಷಿಣ ಭಾರತದಲ್ಲಿ ಬ್ಯುಸಿ ಆಗಿದ್ದಾರೆ. ಈ ಮೊದಲು ಅವರು ಕ್ಯಾನ್ಸರ್​ನ ಗೆದ್ದು ಬಂದಿದ್ದಾರೆ. ಒಂದು ಕಾಲದಲ್ಲಿ ವಿವಿಧ ರೀತಿಯ ದುರಭ್ಯಾಸಕ್ಕೆ ಅವರು ಒಳಗಾಗಿದ್ದರು. ಆದರೆ, ಈಗ ಎಲ್ಲವನ್ನೂ ತೊರೆದು ಅವರು ಒಳ್ಳೆಯ ರೀತಿಯಲ್ಲಿ ಬದುಕುತ್ತಿದ್ದಾರೆ. ‘ಕೆಜಿಎಫ್ 2’ ಚಿತ್ರದಲ್ಲಿ ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಂಡರು. ಇಲ್ಲಿಂದ ಅವರ ಸೆಕೆಂಡ್ ಇನ್ನಿಂಗ್ಸ್ ಆರಂಭ ಆಯಿತು. ಇದಾದ ಬಳಿಕ ಹಲವು ದಕ್ಷಿಣದ ಸಿನಿಮಾಗಳಲ್ಲಿ ಕಾಣಿಸಿಕೊಂಡರು.

‘ಕೆಡಿ’ ಸಿನಿಮಾಗೆ ಪ್ರೇಮ್ ನಿರ್ದೇಶನ ಇದೆ. ಧ್ರುವ ಸರ್ಜಾ ಜೊತೆ ಶಿಲ್ಪಾ ಶೆಟ್ಟಿ ಕೂಡ ನಟಿಸಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲೂ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿದೆ.