ಅಂತರರಾಷ್ಟ್ರೀಯ ಖ್ಯಾತಿಗೆ ನಂದಿನಿ ತುಪ್ಪ – ಪ್ಯಾಕೇಜಿಂಗ್‌ನಲ್ಲಿ ನವೀನತೆ

ಮೈಸೂರು: ನಂದಿನಿ ತುಪ್ಪ ನಕಲು ತಡೆಗೆ ನೂತನ ವಿನ್ಯಾಸದ ಪ್ಯಾಕೆಟ್​ನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ನೂತನ ನಂದಿನಿ ತುಪ್ಪದ ಪ್ಯಾಕೆಟ್ ಹೊಸ ಆರ್ಟ್ ವರ್ಕ್ ಹೊಂದಿದ್ದು, ಗ್ರಾಹಕರನ್ನು ಆಕರ್ಷಿಸಲಿದೆ.

ಮೈಸೂರು ಜಿಲ್ಲಾ ಹಾಲು ಒಕ್ಕೂಟ ಸಹಕಾರ ಸಂಘಗಳ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಅವರು, ನೂತನ 500 ಮಿಲಿಲೀಟರ್​ ಹಾಗೂ 1 ಲೀಟರ್​ ಪ್ಯಾಕೆಟ್ ಅನ್ನು ಬಿಡುಗಡೆ ಮಾಡಿದರು.

ಸ್ಕ್ಯಾನ್ ಮಾಡಿದರೆ ಸಂಪೂರ್ಣ ಮಾಹಿತಿ: ಈ ವೇಳೆ ಮಾತನಾಡಿದ ಅವರು, ನೂತನ ನಂದಿನಿ ತುಪ್ಪದ ಪ್ಯಾಕೆಟ್‌ನ ಮೇಲೆ ಹಾಲೋಗ್ರಾಮ್ ಮುದ್ರಿಸಲಾಗಿದ್ದು, ನಕಲು ಮಾಡಲು ಅವಕಾಶವಿಲ್ಲ. ತುಪ್ಪದ ಪ್ಯಾಕೆಟ್ ಕೋಡ್ ಸ್ಕ್ಯಾನ್ ಮಾಡಿದರೆ ಅದರ ಬ್ಯಾಚ್ ನಂಬರ್, ತಯಾರಿಸಿದ ದಿನಾಂಕ ಹಾಗೂ ಯಾವ ದಿನಾಂಕದವರೆಗೆ ಬಳಸಬಹುದು ಎಂಬುದರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.

ನೂತನ ಪ್ಯಾಕೆಟ್ ಮುಟ್ಟಿದರೆ ತುಪ್ಪದ ಫೀಲ್ ಸಿಗುತ್ತದೆ. ಪ್ಯಾಕೇಜಿಂಗ್ ಮಾದರಿ ಮಾತ್ರ ಬದಲಾಗಿದ್ದು, ಗುಣಮಟ್ಟ ಹಾಗೂ ದರದಲ್ಲಿ ಯಾವುದೇ ಬದಲಾವಣೆಯಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಹಳೆಯ ಪ್ಯಾಕೆಟ್​ಗಳಿದ್ದು, ಅವುಗಳು ಮಾರಾಟವಾದ ಬಳಿಕ ನೂತನ ಪ್ಯಾಕೆಟ್ ಪೂರೈಕೆ ಮಾಡಲಾಗುತ್ತದೆ. ತುಪ್ಪದ ಕೊರತೆಯಾಗಬಾರದು ಎಂಬ ಕಾರಣಕ್ಕೆ ಈಗಾಗಲೇ ಪ್ಯಾಕೇಜಿಂಗ್ ಶುರುವಾಗಿದ್ದು, ಇನ್ನೂ 10 ದಿನಗಳಲ್ಲಿ ನೂತನ ಪ್ಯಾಕೆಟ್ ಗ್ರಾಹಕರಿಗೆ ದೊರೆಯಲಿದೆ ಎಂದು ಹೇಳಿದರು.

ತಿರುಪತಿಗೆ ನಂದಿನಿ ತುಪ್ಪ ಪೂರೈಕೆ : ತಿರುಪತಿಯ ತಿಮ್ಮಪ್ಪನ ದೇವಸ್ಥಾನಕ್ಕೆ ಈಗಾಗಲೇ 2 ಸಾವಿರ ಮೆಟ್ರಿಕ್ ಟನ್ ತುಪ್ಪ ಪೂರೈಕೆ ಮಾಡಲಾಗಿದೆ. ಹೆಚ್ಚುವರಿಯಾಗಿ 2 ಸಾವಿರ ಮೆಟ್ರಿಕ್ ಟನ್ ತುಪ್ಪಕ್ಕೆ ಕಾರ್ಯಾದೇಶ ಬಂದಿದೆ. 500 ಮೆಟ್ರಿಕ್ ಟನ್ ತುಪ್ಪ ಪೂರೈಸಿದ್ದು, ಒಟ್ಟು ಮೂರೂವರೆ ಸಾವಿರ ಮೆಟ್ರಿಕ್ ಟನ್ ತುಪ್ಪ ಪೂರೈಕೆ ಮಾಡಲಾಗುತ್ತಿದೆ ಎಂದರು.

ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯು, ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನೇ ಬಳಸುವಂತೆ ಆದೇಶ ಹೊರಡಿಸಿದೆ. ಈಗಾಗಲೇ ಚಾಮುಂಡಿಬೆಟ್ಟ, ಮಲೈ ಮಹದೇಶ್ವರ ಬೆಟ್ಟದ ದೇವಸ್ಥಾನಕ್ಕೆ ಪೂರೈಕೆ ಮಾಡಲಾಗಿದೆ. ಬೇಡಿಕೆ ಸಲ್ಲಿಸಿರುವ ದೇವಸ್ಥಾನಗಳಿಗೆ ಸರಬರಾಜು ಮಾಡಲಾಗುತ್ತಿದೆ. ಎ ಮತ್ತು ಬಿ ವರ್ಗದ ಹಲವು ದೇವಾಲಯಗಳಿಗೆ ತುಪ್ಪ ಪೂರೈಸಲಾಗಿದೆ ಎಂದು ವಿವರಿಸಿದರು.

ಆಸ್ಟ್ರೇಲಿಯಾ, ಕೆನಡಾದಿಂದಲೂ ತುಪ್ಪಕ್ಕೆ ಬೇಡಿಕೆ: ರಾಜ್ಯ ಮಾತ್ರವಲ್ಲದೆ ದಕ್ಷಿಣ, ಉತ್ತರ ಭಾರತದ ಹಲವು ರಾಜ್ಯಗಳು, ಸೌದಿ ಅರೇಬಿಯಾ, ದುಬೈನಲ್ಲೂ ನಂದಿನಿ ಔಟ್‌ಲೆಟ್‌ಗಳಿವೆ. ಆಸ್ಟ್ರೇಲಿಯಾ, ಕೆನಡಾದಿಂದಲೂ 3 ಸಾವಿರ ಟನ್ ತುಪ್ಪಕ್ಕೆ ಬೇಡಿಕೆ ಬಂದಿದೆ ಎಂದು ಹೇಳಿದರು.

ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ್‌, ಕೆಎಂಎಫ್​ನ ಹಿರಿಯ ನಿರ್ದೇಶಕರು, ಎಲ್ಲಾ ಹಾಲು ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರು, ಮಾರುಕಟ್ಟೆ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.