ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ಕುರಬಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಯೊರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಮನೋಜ್ ಕುಮಾರ್ (10) ಮೃತ ವಿದ್ಯಾರ್ಥಿ. ಈತ ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಸಮಯದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈತನಿಗೆ ಹೃದಯ ಸಂಬಂಧಿ ಸಮಸ್ಯೆಯಿದ್ದು ಮೈಸೂರಿನ ಜಯದೇವ ಹಾಗೂ ಅಪೋಲೋ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಚಿಕಿತ್ಸೆ ಕೊಡಿಸುತ್ತಿದ್ದರು ಎಂದು ವರದಿಯಾಗಿದೆ.
ಮೂಲತಃ ದೊಡ್ಡಹುಂಡಿ ಗ್ರಾಮದ ನಾಗರಾಜು ಹಾಗೂ ನಾಗರತ್ನ ದಂಪತಿಯ ಪುತ್ರ ಮನೋಜ್ ಕುಮಾರ್ ದೊಡ್ಡಹುಂಡಿಯಲ್ಲಿ ಒಂದು ಮತ್ತು ಎರಡನೇ ತರಗತಿ ವ್ಯಾಸಂಗ ಮಾಡಿದ್ದನು. ಮೂರನೇ ತರಗತಿಗೆ ಪಟ್ಟಣದ ಕುರಬಗೇರಿ ಹಿರಿಯ ಪ್ರಾಥಮಿಕ ಶಾಲೆಗೆ ದಾಖಲಾಗಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಮೃತ ವಿದ್ಯಾರ್ಥಿಯ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಮಗನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಮೃತ ಮನೋಜ್ ಕುಮಾರ್ ಸಂಬಂಧಿ ಭಾಗ್ಯಮ್ಮ ಮಾತನಾಡಿ, “ಮನೋಜ್ ಕುಮಾರ್ ಹೃದಯದಲ್ಲಿ ರಂಧ್ರವಿತ್ತು. 7 ವರ್ಷದ ಬಳಿಕ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು. ಆದರೆ, ಇತ್ತೀಚೆಗೆ ತಪಾಸಣೆ ನಡೆಸಿದಾಗ ರಂಧ್ರ ದೊಡ್ಡಾಗಿರುವುದು ಕಂಡು ಬಂದಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಮೊನ್ನೆಯೂ ನೋವು ಎನ್ನುತ್ತಿದ್ದ. ಇಂದು ಶಾಲೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಹೇಳಿದರು.


