ರಾಜ್ಯಾಧ್ಯಕ್ಷನಾಗಿ ನಾನೇ ಮುಂದುವರಿಯುವ ವಿಶ್ವಾಸವಿದೆ: ವಿಜಯೇಂದ್ರ

ಮೈಸೂರು : ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ರಾಷ್ಟ್ರೀಯ ನಾಯಕರ ನಿರ್ಧಾರವನ್ನು ಪಾಲನೆ ಮಾಡುತ್ತೇನೆ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷನಾಗಿ ಮುಂದುವರೆಯುವ ನಂಬಿಕೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ಇಂದು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜೀನಾಮೆ ಪರ್ವ ದೆಹಲಿಗೆ ವರ್ಗಾವಣೆ ಆಗುತ್ತಿರುವ ಬಗ್ಗೆ ದೆಹಲಿಯಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ ಬೆಂಗಳೂರಿಗೆ ಬಂದು ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಶೀಘ್ರವೇ ರಾಜೀನಾಮೆ ಕೊಡುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ನಂತರ ರಾಷ್ಟ್ರಮಟ್ಟದಲ್ಲಿ ಅವರನ್ನು ಕಾಂಗ್ರೆಸ್‌ ಒಬಿಸಿ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದ್ದಾರೆ. ಇದರರ್ಥ ಸಿದ್ದರಾಮಯ್ಯ ದೆಹಲಿಗೆ ಶಿಫ್ಟ್​ ಆಗುತ್ತಿರುವುದು ನಿಶ್ಚಿತ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂದು ವಿಜಯೇಂದ್ರ ಅಭಿಪ್ರಾಯಪಟ್ಟರು.

ಮುಡಾ ಹಗರಣದಲ್ಲೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿತ್ತು: ರಾಜ್ಯದಲ್ಲಿ ಸರ್ಕಾರ ಗ್ಯಾರಂಟಿ ಜಪಮಾಡಿ ಅಧಿಕಾರಕ್ಕೆ ಬಂದಿದೆ. ಜೊತೆಗೆ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಈಗ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನ ಮಾಡುತ್ತಿದೆ. ದಿನ ಬಳಕೆ ವಸ್ತುಗಳ ದರ ಹೆಚ್ಚಳ, ಪೆಟ್ರೋಲ್‌, ಡೀಸೆಲ್, ಹಾಲಿನ ದರ ಹೆಚ್ಚಳ ಸೇರಿದಂತೆ ಎಲ್ಲ ಬೆಲೆಯಲ್ಲೂ ಏರಿಕಯಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮುಡಾ ಹಗರಣದಲ್ಲಿ ಸಿಎಂ ಪತ್ನಿ 14 ನಿವೇಶನಗಳನ್ನು ವಾಪಸ್‌ ಕೊಡುವ ಮೂಲಕ ಮುಡಾದಲ್ಲಿ ಹಗರಣ ನಡೆದಿರುವುದನ್ನ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಈ ವಿಚಾರದಲ್ಲಿ ಒಂದು ವರ್ಷದ ಹಿಂದೆಯೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿತ್ತು. ಆದರೆ ಭಂಡತನ ಪ್ರದರ್ಶನ ಮಾಡುವ ಮೂಲಕ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದರು.

10 ವರ್ಷಗಳ ನಂತರ ಕಾಂತರಾಜ ವರದಿಯನ್ನು ಅನುಷ್ಠಾನ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಮತ್ತೆ ಸರ್ವೇ ಸಹ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಗ್ಯಾರಂಟಿಯಿಂದ ಆರ್ಥಿಕ ದಿವಾಳಿ : ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ಅವರ ಪಕ್ಷದ ರಾಯರೆಡ್ಡಿಯವರು ಗ್ಯಾರಂಟಿಯಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ಆಗಿದೆ ಎಂದು ಹೇಳುವ ಮೂಲಕ, ಗ್ಯಾರಂಟಿ ಬೇಕೋ ಬೇಡವೋ ಎಂಬ ಚರ್ಚೆ ನಡೆಯುತ್ತಿದೆ. ರಾಜ್ಯ ಸರ್ಕಾರ ಗ್ಯಾರಂಟಿಯ ಮೂಲಕ ರಾಜ್ಯವನ್ನ ದಿವಾಳಿ ಮಾಡಿದೆ ಎಂದಿದ್ದಾರೆ.

ಶಿವಮೊಗ್ಗ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ನಿರಂತರವಾಗಿ ಗಲಾಟೆಗಳು ನಡೆಯುತ್ತಿವೆ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿರುವುದರಿಂದಾಗಿ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಅಡ್ಡಿಯಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಇದೆ, ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಅಂದುಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ಸರ್ಕಾರವೇ ಹೊಣೆ ಎಂದು ಹೇಳಿದರು.