ತುಮಕೂರು – ‘ಹೋಟೆಲ್‌ನಲ್ಲಿ ದಾವಣಗೆರೆ ಪಿಎಸ್‍ಐ ನೇಣಿಗೆ ಶರಣು’

ತುಮಕೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪೊಲೀಸ್​​ ಸಬ್ ಇನ್ಸ್​ಪೆಕ್ಟರ್​​ವೊಬ್ಬರು ನಗರದ ಖಾಸಗಿ ಲಾಡ್ಜ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಾಗರಾಜಪ್ಪ ಆತ್ಮಹತ್ಯೆ ಮಾಡಿಕೊಂಡವರು.

ಪಿಎಸ್​ಐ​​ ನಾಗರಾಜಪ್ಪ ಜುಲೈ 1ರಂದು ತುಮಕೂರು ನಗರದ ದ್ವಾರಕಾ ಲಾಡ್ಜ್​​ನ 4ನೇ ಮಹಡಿಯಲ್ಲಿ ರೂಮ್​ ಬಾಡಿಗೆ ಪಡೆದಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಇಂದು (ಭಾನುವಾರ) ಬೆಳಗ್ಗೆ ಬೆಳಕಿಗೆ ಬಂದಿದೆ.

ಕೊಠಡಿಯಲ್ಲಿ ಬಾಂಡ್ ಪೇಪರ್​​ನಲ್ಲಿ ವಿಲ್ ಬರೆದಿಟ್ಟಿದ್ದಾರೆ. ಮೊಬೈಲ್ ಸೇರಿದಂತೆ, ಡೆತ್​​ನೋಟ್ ಮತ್ತು ಬಾಂಡ್ ಪೇಪರ್ ವಶಕ್ಕೆ ಪಡೆಯಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇಂದು ಲಾಡ್ಜ್​​ನಲ್ಲಿ ದುರ್ವಾಸನೆ ಬಂದಾಗ, ಅಲ್ಲಿನ ಸಿಬ್ಬಂದಿ ನೋಡಿದ್ದಕ್ಕೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ತುಮಕೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.