ತುಮಕೂರು: ಹಣಕಾಸು ವಿಚಾರಕ್ಕೆ ಹಾಡಹಗಲೇ ವ್ಯಕ್ತಿಯೋರ್ವ ತನ್ನ ಗೆಳೆಯನನ್ನೇ ಚಾಕುವಿನಿಂದ ಇರಿದು, ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಬಟವಾಡಿ ಬಳಿಯ ಮಹಾಲಕ್ಷ್ಮಿ ಲೇಔಟ್ನಲ್ಲಿ ಶನಿವಾರ ನಡೆದಿದೆ.

ಕೋತಿತೋಪು ನಿವಾಸಿ ನಫೀಸ್ ಅಹಮ್ಮದ್ (33) ಕೊಲೆಯಾದ ವ್ಯಕ್ತಿ. ಫೈರೋಜ್ ಪಾಷಾ ಆರೋಪಿಯಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಕೊಲೆಯಾದ ನಫೀಸ್ ಅಹಮ್ಮದ್ ಟೈಲ್ಸ್ ಕೆಲಸ ಮಾಡುತ್ತಿದ್ದ. ಆರೋಪಿ ಫೈರೋಜ್ ಪಾಷಾಗೆ ಬೈಕ್ ಗ್ಯಾರೇಜ್ ಇದೆ. ಈತನಿಂದ ಮೃತ ನಫೀಸ್ ಅಹಮ್ಮದ್ ಸುಮಾರು 7 ಲಕ್ಷ ರೂ. ಸಾಲ ಪಡೆದಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು, ಕೊಲೆಯಲ್ಲಿ ಅಂತ್ಯವಾಗಿದೆ.
ಘಟನಾ ಸ್ಥಳಕ್ಕೆ ಎನ್ಇಪಿಎಸ್ ಠಾಣೆ ಪೊಲೀಸರು ಹಾಗೂ ತುಮಕೂರು ಎಸ್ಪಿ ಅಶೋಕ್ ಕೆ.ವಿ. ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಸಂಬಂಧ ಎನ್ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಬಗ್ಗೆ ಎಸ್ಪಿ ಮಾಹಿತಿ: “ಸಂಜೆ ಸುಮಾರು 4:15 ಸಂದರ್ಭದಲ್ಲಿ ಕೊಲೆ ನಡೆದಿರುವ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತನನ್ನು ನಫೀಸ್ ಎಂದು ಪತ್ತೆಹಚ್ಚಿದ್ದಾರೆ. ಆರೋಪಿ ಫೈರೋಜ್ ಪಾಷಾ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಹಣಕಾಸು ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿರುವ ಮಾಹಿತಿ ಲಭ್ಯವಾಗಿದೆ. ಸುಮಾರು ಏಳು ಲಕ್ಷ ರೂ. ಹಣವನ್ನು ಸಾಲವಾಗಿ ಮೃತ ವ್ಯಕ್ತಿ ಪಡೆದಿದ್ದನು ಎಂಬುದು ಬೆಳಕಿಗೆ ಬಂದಿದೆ. ಇಬ್ಬರೂ ಕೂಡ ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಒಟ್ಟಿಗೆ ಓಡಾಡುತ್ತಿದ್ದರು. ಆದರೆ ಹಣಕಾಸಿನ ವಿಚಾರ ಮುನ್ನೆಲೆಗೆ ಬಂದ ನಂತರ ಇಬ್ಬರಲ್ಲಿಯೂ ವೈಷಮ್ಯ ಸೃಷ್ಟಿಯಾಗಿತ್ತು” ಎಂದು ಎಸ್ಪಿ ಅಶೋಕ್ ಕೆ.ವಿ. ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಇಬ್ಬರ ಸಂಬಂಧಿಕರು ಕೂಡ ಮಧ್ಯ ಪ್ರವೇಶಿಸಿ ಅನೇಕ ಬಾರಿ ಇವರ ಸಮಸ್ಯೆ ಬಗೆಹರಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದರೂ ಸಾಧ್ಯವಾಗಿರಲಿಲ್ಲ ಎಂಬ ವಿಚಾರ ತಿಳಿದು ಬಂದಿದೆ.
ಪೊಲೀಸರು ಶವವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದು ಶವ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಇಬ್ಬರೂ ಒಂದೇ ಸಮುದಾಯದವರು ಆಗಿದ್ದರಿಂದ, ಅವರ ಸಂಬಂಧಿಕರು ವಿಷಯ ತಿಳಿದ ತಕ್ಷಣ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭೇಟಿ ನೀಡಿದ್ದಾರೆ.
