ರಿಯೊ ಡಿ ಜನೈರೊ(ಬ್ರೆಜಿಲ್): ನಾಲ್ಕು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್‌ಗೆ ಆಗಮಿಸಿದ್ದಾರೆ. ಶನಿವಾರ ಸಂಜೆ ಗಲಿಯಾವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಇಲ್ಲಿ ಪ್ರಧಾನಿಯವರು 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದು ಅವರ ಐದು ದೇಶಗಳ ಭೇಟಿಯ ನಾಲ್ಕನೇ ಹಂತವಾಗಿದೆ.

“ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಬಂದಿಳಿದಿದ್ದೇನೆ, ಅಲ್ಲಿ ನಾನು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತೇನೆ. ನಂತರ ಅಧ್ಯಕ್ಷ ಲೂಲಾ ಅವರ ಆಹ್ವಾನದ ಮೇರೆಗೆ ರಾಜಧಾನಿ ಬ್ರೆಸಿಲಿಯಾ ಭೇಟಿಗಾಗಿ ತೆರಳುತ್ತೇನೆ. ಈ ಸಮಯದಲ್ಲಿ ಸಭೆಗಳು ಮತ್ತು ಸಂವಾದಗಳನ್ನು ನಿರೀಕ್ಷಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಬ್ರಿಕ್ಸ್ ಸಹಭಾಗಿತ್ವಕ್ಕೆ ಬದ್ಧ! ಪ್ರಧಾನಿ ನರೇಂದ್ರ ಮೋದಿ 17ನೇ ಬ್ರಿಕ್ಸ್ ಶೃಂಗಸಭೆಗಾಗಿ ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಬಂದಿಳಿದಿದ್ದಾರೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಅನಿವಾಸಿ ಭಾರತೀಯರಿಂದ ಪ್ರಧಾನಿ ಸ್ವಾಗತ: ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಅನಿವಾಸಿ ಭಾರತೀಯರು “ಭಾರತ್ ಮಾತಾ ಕಿ ಜೈ” ಘೋಷಣೆಗಳೊಂದಿಗೆ ಸ್ವಾಗತಿಸಿದರು. ನಂತರ ಅವರೊಂದಿಗೆ ಪ್ರಧಾನಿ ಸ್ವಲ್ಪ ಸಮಯ ಮಾತುಕತೆ ನಡೆಸಿದರು. ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೋದಿಗೆ ಭವ್ಯ ಸ್ವಾಗತ ಕೋರಲಾಯಿತು.
ಮೊದಲ ದ್ವಿಪಕ್ಷೀಯ ಭೇಟಿ: ಪ್ರಧಾನಿ ಮೋದಿ ಜುಲೈ 6 ಮತ್ತು 7ರಂದು ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ಬ್ರೆಸಿಲಿಯಾಕ್ಕೆ ರಾಜ್ಯ ಭೇಟಿ ನೀಡಲಿದ್ದಾರೆ. ಸುಮಾರು ಆರು ದಶಕಗಳಲ್ಲೇ ಭಾರತದ ಪ್ರಧಾನಿಯೊಬ್ಬರ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ.
”ಬ್ರಿಕ್ಸ್‌ನ ಸ್ಥಾಪಕ ಸದಸ್ಯ ರಾಷ್ಟ್ರವಾಗಿ, ಉದಯೋನ್ಮುಖ ಆರ್ಥಿಕತೆಗಳ ನಡುವಿನ ಸಹಕಾರಕ್ಕಾಗಿ ಭಾರತವು ಈ ಒಕ್ಕೂಟಕ್ಕೆ ಬದ್ಧವಾಗಿದೆ. ಒಟ್ಟಾಗಿ, ನಾವು ಶಾಂತಿಯುತ, ಸಮಾನ, ನ್ಯಾಯಯುತ, ಪ್ರಜಾಪ್ರಭುತ್ವ ಮತ್ತು ಸಮತೋಲಿತ ಪ್ರಪಂಚಕ್ಕಾಗಿ ಶ್ರಮಿಸುತ್ತೇವೆ” ಎಂದು ಪ್ರಧಾನಿ ಹೇಳಿದ್ದರು.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಳಗೊಂಡಿರುವ ಬ್ರಿಕ್ಸ್ಗೆ ಐದು ಹೆಚ್ಚುವರಿ ಸದಸ್ಯರನ್ನು ಸೇರಿಸಿಕೊಳ್ಳಲಾಗಿದೆ. ಅವು ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳಾಗಿವೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅರ್ಜೆಂಟೀನಾ ಪ್ರವಾಸದಲ್ಲಿ ಅಧ್ಯಕ್ಷ ಜೇವಿಯರ್ ಮಿಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ದ್ವಿಮುಖ ವ್ಯಾಪಾರವನ್ನು ವೃದ್ಧಿಸಲು, ರಕ್ಷಣೆ, ಪ್ರಮುಖ ಖನಿಜಗಳು, ಔಷಧ, ಇಂಧನ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡಲು ಸಮ್ಮತಿ ನೀಡಿದರು.
ಶೃಂಗಸಭೆಯ ಹೊರತಾಗಿ, ಮೋದಿ ಹಲವು ವಿಶ್ವ ನಾಯಕರನ್ನು ಭೇಟಿ ಮಾಡಲಿದ್ದಾರೆ. ಐದು ರಾಷ್ಟ್ರಗಳ ಭೇಟಿಯ ಭಾಗವಾಗಿ ಮೋದಿ ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಅರ್ಜೆಂಟೀನಾಗೆ ಭೇಟಿ ನೀಡಿದ್ದು, ತಮ್ಮ ಪ್ರವಾಸದಲ್ಲಿ ಕೊನೆಯದಾಗಿ ಅವರು ನಮೀಬಿಯಾಗೆ ತೆರಳಲಿದ್ದಾರೆ.

