ಬಸ್​ನಲ್ಲಿ ಕಿಟಕಿ ಪಕ್ಕದ ಸೀಟ್​ಗಾಗಿ ಯುವಕರ ಮಧ್ಯೆ ಗಲಾಟೆ, ಚಾಕು ಇರಿತ

ಬೆಳಗಾವಿ: ಕೆಎಸ್ಆರ್​ಟಿಸಿ ಬಸ್​​ನಲ್ಲಿ ಕಿಟಕಿ ಪಕ್ಕದ ಸೀಟ್​​ಗಾಗಿ ಯುವಕರ ನಡುವೆ ಗಲಾಟೆ ನಡೆದು ಅಪರಿಚಿತ ಯುವಕರ ಗುಂಪೊಂದು ಓರ್ವ ಯುವಕನಿಗೆ ಚಾಕು ಇರಿದು ಪರಾರಿಯಾದ ಘಟನೆ ಬೆಳಗಾವಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದಿಂದ ಸಿಬಿಟಿಗೆ ಬರುತ್ತಿದ್ದ ಬಸ್​​ನಲ್ಲಿ ಆಸನಕ್ಕೋಸ್ಕರ ಜಗಳವಾಗಿದ್ದು, ಈ ವೇಳೆ ಯುವಕನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಪಂತಬಾಳೆಕುಂದ್ರಿ ಗ್ರಾಮದ ಮಾಜ್ ಸನದಿ (20) ಚಾಕು ಇರಿತಕ್ಕೆ ಒಳಗಾದ ಯುವಕ. ಮಜ್ಜುನ ಎದೆ ಭಾಗಕ್ಕೆ ಚಾಕು ಇರಿದು ಅಪರಿಚಿತ ಯುವಕರ ಗ್ಯಾಂಗ್ ಪರಾರಿಯಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಬೆಳಗಾವಿ ಬಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಯುವಕನನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಂತಬಾಳೇಕುಂದ್ರಿಯಿಂದ ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಬರುವವರೆಗೂ ಪರಸ್ಪರ ಜಗಳವಾಡಿದ್ದಾರೆ. ಈ ವೇಳೆ ಅಪರಿಚಿತರು ಹರಿತವಾದ ಆಯುಧದಿಂದ ಯುವಕನಿಗೆ ಇರಿದಿದ್ದಾರೆ. ಈಗಾಗಲೇ ಬಸ್ ಯಾವುದೆಂದು ಗೊತ್ತಾಗಿದ್ದು, ಅಪರಿಚಿತರನ್ನು ಪತ್ತೆ ಮಾಡಲು 3 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಡಿಸಿಪಿ ರೋಹನ್ ಜಗದೀಶ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.