ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್ ರಾಗುಟ್ಟಹಳ್ಳಿಯಲ್ಲಿ ಕ್ಷುಲ್ಲಕ ಕಾರಣದಿಂದ ಚಿಕ್ಕಪ್ಪ ಅಣ್ಣನ ಮಗನ ತಲೆ ಮೇಲೆ ಕಲ್ಲು ಹಾಕಿ ಸಾಯಿಸಿರುವ ಘಟನೆ ನಡೆದಿದೆ.

ಗ್ರಾಮದ ಸುನಿಲ್ 29 ವರ್ಷ ಮೃತಪಟ್ಟ ವ್ಯಕ್ತಿ. ಅವರ ಚಿಕ್ಕಪ್ಪ ರಮೇಶ್ ಕೊಲೆ ಮಾಡಿರುವ ಆರೋಪಿ. ರಮೇಶ್ ಮೊಬೈಲ್ ಅನ್ನು ಸುನಿಲ್ ತೆಗೆದುಕೊಂಡಿದ್ದು ಮತ್ತೆ ವಾಪಸ್ ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಜೂನ್ 8 ರಂದು ಭಾನುವಾರ ಇಬ್ಬರ ನಡುವೆ ಜಗಳವಾಗಿತ್ತು. ರಾತ್ರಿ ಮಲಗಿದ್ದಾಗ ಸುನಿಲ್ ತಲೆಯ ಮೇಲೆ ರಮೇಶ್ ದೊಡ್ಡ ಸೈಜು ಕಲ್ಲು ಎತ್ತಿ ಹಾಕಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತೀವ್ರವಾಗಿ ಗಾಯಗೊಂಡಿದ್ದ ಸುನಿಲ್ಗೆ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ಸೇರಿಸಲಾಗಿತ್ತು. ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ರಮೇಶ್ ಪರಾರಿಯಾಗಿದ್ದಾನೆ. ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.
