‘ಡಿವೈಡರ್‌ಗೆ ಡಿಕ್ಕಿಯಾಗಿ ಎರಡು ಪೀಸ್ ಆದ ಟೆಂಪೋ’

ಬೆಂಗಳೂರು: ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಟೆಂಪೋವೊಂದು ಎರಡು ತುಂಡಾಗಿ ಬ್ರಿಡ್ಜ್​ನಿಂದ ಕೆಳಗೆ ಬಿದ್ದ ಘಟನೆ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಜ್ಞಾನಭಾರತಿ ಬಳಿಯ ರಿಂಗ್ ರಸ್ತೆಯಲ್ಲಿರುವ ರಾಮಸಂದ್ರ ಬ್ರಿಡ್ಜ್ ಬಳಿ ನಡೆದಿದೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬ್ಯಾಡರಹಳ್ಳಿಯಿಂದ ಕೆಂಗೇರಿ ಕಡೆಗೆ ತೆರಳುತ್ತಿದ್ದ ಬೆಡ್​ಶೀಟ್​, ಕಾಟನ್ ತುಂಬಿದ್ದ ಟೆಂಪೋದ ಚಾಲಕ ರಾಘವೇಂದ್ರ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಾನೆ. ಇದರಿಂದ ರಸ್ತೆಯ ಬಲ ಭಾಗದ ವಿಭಜಕಕ್ಕೆ ಟೆಂಪೋ ಡಿಕ್ಕಿಯಾಗಿದೆ. ಈ ವೇಳೆ ಡ್ರೈವರ್ ಕ್ಯಾಬಿನ್ ತುಂಡಾಗಿ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಟೆಂಪೋ ಬಾಡಿ ರಸ್ತೆಯ ಮೇಲೆ ಉಳಿದುಕೊಂಡಿದೆ. ಪರಿಣಾಮ ಟೆಂಪೋ ಚಾಲಕ ರಾಘವೇಂದ್ರ, ಜೊತೆಗಿದ್ದ ಸಲೀಂ, ಫಯಾಜ್ ಅವರಿಗೆ ಗಾಯಗಳಾಗಿವೆ. ಮೂವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣವರ್ ಮಾಹಿತಿ ನೀಡಿದರು.

ಚಾಲಕ ರಾಘವೇಂದ್ರನ ವಿರುದ್ಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು.