ಕಾರವಾರ (ಉತ್ತರ ಕನ್ನಡ) : ನಗರದ ಕಾಯ್ಕಿಣಿ ರಸ್ತೆಯ ಮಾಡರ್ನ್ ಉಡುಪಿ ಹೋಟೆಲ್ ಬಳಿ ಇಂದು ಬೆಳಗ್ಗೆ ಕೂದಲೆಳೆ ಅಂತರದಲ್ಲಿ ಭಾರಿ ದುರಂತವೊಂದು ತಪ್ಪಿದೆ. ಸುಭಾಷ್ ವೃತ್ತದ ಕಡೆಗೆ ಚಲಿಸುತ್ತಿದ್ದ ಸ್ಕೂಟಿಯೊಂದರ ಮೇಲೆ ಏಕಾಏಕಿ ಬೃಹತ್ ಮರದ ರೆಂಬೆಯೊಂದು ಮುರಿದು ಬಿದ್ದಿದ್ದು, ಸ್ಕೂಟಿಯಲ್ಲಿದ್ದ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನೆ ಸಂಭವಿಸುತ್ತಿದ್ದಂತೆಯೇ ಸ್ಕೂಟಿ ಅಡ್ಡಲಾಗಿ ಬಿದ್ದ ಪರಿಣಾಮ ಬಾಲಕಿಯ ತಲೆಗೆ ಪೆಟ್ಟಾಗಿದೆ. ಕೂಡಲೇ ಸ್ಕೂಟಿ ಸವಾರರು ಬಾಲಕಿಯನ್ನು ಬೇರೆ ವಾಹನದ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದು, ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ.
ಮರದ ರೆಂಬೆ ರಸ್ತೆಗೆ ಬಿದ್ದ ವಿಷಯ ತಿಳಿದ ತಕ್ಷಣ ಕಾರವಾರ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನ ಸಂಚಾರವನ್ನು ನಿಯಂತ್ರಿಸಿದ್ದಾರೆ. ನಂತರ ನಗರಸಭೆ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಕಾಯ್ಕಿಣಿ ರಸ್ತೆಯಲ್ಲಿರುವ ಈ ಮರ ಹಲವು ವರ್ಷಗಳಷ್ಟು ಹಳೆಯದಾಗಿದ್ದು, ಬೃಹತ್ ಗಾತ್ರದ್ದಾಗಿದೆ. ಮಳೆಗಾಲದಲ್ಲಿ ನೀರಿಗೆ ನೆನೆದು ಮರದ ರೆಂಬೆಗಳು ಅಪಾಯಕಾರಿಯಾಗಿ ಪರಿಣಮಿಸಿವೆ.
ಗಾಳಿ ಮತ್ತು ಮಳೆಯಿಂದ ಮತ್ತೆ ಮರದ ರೆಂಬೆಗಳು ಬೀಳುವ ಸಾಧ್ಯತೆಯಿದ್ದು, ಆತಂಕ ಹೆಚ್ಚಾಗಿದೆ. ಈ ಮರದ ಕೆಳಗೆ ಹಲವಾರು ಅಂಗಡಿಗಳಿದ್ದು, ರೆಂಬೆ ಮುರಿದು ಬಿದ್ದ ಬೆನ್ನಲ್ಲೇ ಅಂಗಡಿ ಮಾಲೀಕರು ಭಯಭೀತರಾಗಿದ್ದಾರೆ. ಕೂಡಲೇ ಅಪಾಯಕಾರಿ ರೆಂಬೆಗಳನ್ನು ತೆರವುಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.


