ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ದೂರದೃಷ್ಠಿ ಯೋಜನೆಯ ಕುರಿತು ಜಿಲ್ಲಾ ಪಂಚಾಯತ್ ನಿಂದ ಆಯ್ಕೆಯಾದ ತಾಲೂಕಾ ಮಟ್ಟದ ಉಸ್ತುವಾರಿ ಅಧಿಕಾರಿ ಹಾಗೂ ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಗೆ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ತರಬೇತುದಾರರ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಿಯಾಂಗಾ ಎಂ. ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಮುಂದಿನ ಐದು ವರ್ಷಗಳಲ್ಲಿ ಜನರಿಗೆ ಅನುಕೂಲವಾಗುವಂತೆ ಹೇಗೆಲ್ಲ ವ್ಯವಸ್ಥಿತ ಕಾರ್ಯಕ್ರಮ ರೂಪಿಸಬೇಕಿದೆ ಎಂಬುದು ಮುಖ್ಯವಾಗಿದೆ. ಆದರೆ ಎಲ್ಲ ಸಮಗ್ರ ಮಾಹಿತಿ ಇಲ್ಲದಿದ್ದರೆ ದೂರದೃಷ್ಟಿ ಯೋಜನಾ ಕಾರ್ಯಕ್ರಮ ಆಯೋಜಿಸುವುದು ಅತ್ಯಂತ ಕಷ್ಟಕರ. ಹೀಗಾಗಿ ಗ್ರಾಮ ಪಂಚಾಯತಿಗಳ ಮೂಲ ಸಂಪನ್ಮೂಲಗಳ ಬಗ್ಗೆ ಮೊದಲು ಅರಿತುಕೊಂಡರೆ ದೂರದೃಷ್ಟಿ ಯೋಜನೆಯನ್ನು ಸುಲಭವಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದರು.
ಸೂಕ್ತ ಮಾಹಿತಿ ಒಳಗೊಂಡಂತೆ ಅತ್ಯಂತ ಶ್ರಮವಹಿಸಿ ಜಾರಿಗೊಳಿಸಿದ ಮಹತ್ತರ ಕಾರ್ಯಕ್ರಮಗಳು ಯಾವುದೇ ಅಡೆತಡೆಗಳಿಲ್ಲದೇ ಯಶಸ್ವಿಯಾಗುತ್ತವೆ. ತದನಂತರದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಆ ಯಶಸ್ವಿ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನವಾಗುತ್ತದೆ. ಹೀಗಾಗಿ ಈ ತರಬೇತುದಾರರ ಎರಡು ದಿನಗಳ ತರಬೇತಿಯಲ್ಲಿ ಪಾಲ್ಗೊಂಡಿರುವ ತಾಲೂಕಾ ಮಟ್ಟದ ಉಸ್ತುವಾರಿ ಅಧಿಕಾರಿ ಹಾಗೂ ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಸೂಕ್ತವಾಗಿ ತಿಳಿದುಕೊಳ್ಳಬೇಕು. ಜೊತೆಗೆ ತಮ್ಮ ವ್ಯಾಪ್ತಿಯ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಮಗ್ರ ಮಾಹಿತಿ ಒಳಗೊಂಡ ದೂರದೃಷ್ಟಿ ಯೋಜನೆ ತಯಾರಿಸಲು ಮುಂದಾಗಬೇಕು ಎಂದು ತಿಳಿಸಿದರು.
ನಂತರ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಧಾರವಾಡದ ಉಸ್ತುವಾರಿ ಬೋಧಕರಾದ ಚಂದ್ರಶೇಖರ, ಗಿರೀಶ್, ವಾಸುದೇವ ಭಾಗವತ್ ಅವರು ಮುಖಾಮುಖಿ, ವಿಡಿಯೋ ಸಂವಾದ ಹಾಗೂ ಕ್ಷೇತ್ರ ಭೇಟಿ ಮೂಲಕ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಆಡಳಿತ ವಿಭಾಗದ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್, ಯೋಜನಾ ನಿರ್ದೇಶಕ (ಡಿಆರ್‌ಡಿಎ) ಕರೀಂ ಅಸದಿ ಎಚ್.ಎ. ಸಹಾಯಕ ಕಾರ್ಯದರ್ಶಿ ಜೆ.ಆರ್. ಭಟ್, ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಹಾಗೂ ತಾಲೂಕ ಮಟ್ಟದ ಉಸ್ತುವಾರಿ ಅಧಿಕಾರಿಗಳು ಹಾಗೂ ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಜಿಲ್ಲಾ ಪಂಚಾಯತ ಸಿಬ್ಬಂದಿ ಉಪಸ್ಥಿತರಿದ್ದರು.