
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಅಬ್ಬರ ಮುಂದುವರಿದಿದ್ದು, ಜೂ.26ರವರೆಗೂ ಕರಾವಳಿಯಲ್ಲಿ ಹೆಚ್ಚಿನ ಮಳೆಯಾಗುವ ಸೂಚನೆ ನೀಡಿದೆ. ಹಲವು ಕಡೆ ಭೂ ಕುಸಿತವಾಗುವ ಸಾಧ್ಯತೆ ಹಿನ್ನೆಲೆ ಜನವಸತಿ ಪ್ರದೇಶಗಳಲ್ಲಿ ಜನರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ.
8 ಕುಟುಂಬಗಳಿಗೆ ಸ್ಥಳಾಂತರ ನೋಟಿಸ್:
ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಭೂಕುಸಿತದ ಅಪಾಯ ಹೆಚ್ಚಿದ್ದು, ಬೆಟ್ಟದಂಚಿನ 8 ಕುಟುಂಬಗಳಿಗೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಮುಟ್ಟಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಚಂದಾವರ ನೋಟಿಸ್ ಜಾರಿ ಮಾಡಿದ್ದಾರೆ. ಪ್ರದೇಶವು ವಾಸಕ್ಕೆ ಯೋಗ್ಯವಲ್ಲ ಎಂಬ ವರದಿಯ ಹಿನ್ನೆಲೆ ನೋಟಿಸ್ ನೀಡಲಾಗಿದೆ. ಆದರೆ ಪರ್ಯಾಯ ವ್ಯವಸ್ಥೆಗಳಿಲ್ಲದೆ ಎಲ್ಲಿಗೆ ಹೋಗಬೇಕು ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ನೋಟಿಸ್ ನೀಡಿದ್ದರಿಂದ ಇದೀಗ ಜನರು ತಮ್ಮ ಸಂಬಂಧಿಗಳ ಮನೆಗೆ ಸ್ಥಳಾಂತರಗೊಳ್ಳುತಿದ್ದು, ಮಳೆ ಮುಗಿಯುವವರೆಗಾದರೂ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಕೇಳಿಕೊಂಡಿದ್ದಾರೆ.
ಮುರುಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರಿಗೆ ನಿಷೇಧ:
ಮಳೆಗಾಲ ಪ್ರಾರಂಭದಲ್ಲೇ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಆದರೇ ಭಟ್ಕಳದ ಮುರುಡೇಶ್ವರದಲ್ಲಿ ಪ್ರವಾಸಿಗರು ಹೆಚ್ಚು ಬರುತಿದ್ದು ನಿರ್ಬಂಧವಿದ್ದರೂ ಕಡಲಿಗಿಳಿಯುತಿದ್ದರು. ಈ ಹಿನ್ನೆಲೆ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಪ್ರವಾಸೋದ್ಯಮ ಇಲಾಖೆ ಮತ್ತು ಗ್ರಾಮ ಪಂಚಾಯತ್ ಮಾವಳ್ಳಿ ಇವರ ಸಹಯೋಗದೊಂದಿಗೆ ಕಡಲ ತೀರದಲ್ಲಿ ಸೂಚನಾ ಫಲಕ ಅಳವಡಿಸಲಾಯಿತು. ಸೆಪ್ಟೆಂಬರ್ ಅಂತ್ಯದವರೆಗೂ ಕಡಲತೀರದಲ್ಲಿ ನಿಷೇಧ ಮುಂದುವರೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಕಡಲ ತೀರದಲ್ಲಿ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ.
ಭಟ್ಕಳ ತಾಲೂಕಿನಲ್ಲಿ ಜೋರಾಗಿ ಬೀಸಿದ ಮಳೆಗಾಳಿಯ ರಭಸಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನದಿಂದ ಭೀಕರ ಬಿರುಗಾಳಿಯಿಂದಾಗಿ 18ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಸುಮಾರು 8 ಲಕ್ಷ ರೂಪಾಯಿಗೂ ಹೆಚ್ಚಿನ ಆರ್ಥಿಕ ನಷ್ಟ ಸಂಭವಿಸಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ಹಲವೆಡೆ ವಿದ್ಯುತ್ ಕಡಿತಗೊಂಡಿದ್ದು, ಸ್ಥಳೀಯರಿಗೆ ತೊಂದರೆಯಾಗಿದೆ. ಕಂಬಗಳನ್ನು ಸರಿಪಡಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದಾರೆ.

