
ಪಾಟ್ನಾ: ಬಿಹಾರದ ಸಿವಾನ್‌ನಲ್ಲಿ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಲಿದ್ದಾರೆ. ಜೊತೆಗೆ ರಾಜ್ಯದ ವಿವಿಧೆಡೆ 5,000 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಉತ್ತರ ಬಿಹಾರದ ಸಂಪರ್ಕಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮುಜಾಫರ್‌ಪುರ ಮತ್ತು ಬೆಟ್ಟಿಯಾ ಮೂಲಕ ಪಾಟಲಿಪುತ್ರ ಮತ್ತು ಗೋರಖ್‌ಪುರ ಮಾರ್ಗದಲ್ಲಿ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಲಾಗಿದೆ

ಅಲ್ಲದೇ ʻಮೇಕ್ ಇನ್ ಇಂಡಿಯಾ – ಮೇಕ್ ಫಾರ್ ದಿ ವರ್ಲ್ಡ್ʼ ಎಂಬ ಧ್ಯೇಯದೊಂದಿಗೆ ಪ್ರಧಾನಿ ಮೋದಿ ಗಿನಿಯಾ ಗಣರಾಜ್ಯಕ್ಕೆ ರಫ್ತು ಮಾಡಲು ಮಾರ್ಹೌರಾ ಸ್ಥಾವರದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಲೋಕೋಮೋಟಿವ್ ಸಹ ಉದ್ಘಾಟಿಸಲಿದ್ದಾರೆ. ಜೊತೆಗೆ ಗಂಗಾ ನದಿ ಸಂರಕ್ಷಣೆ ಮತ್ತು ಪುನರುಜ್ಜೀವನಗೊಳಿಸುವ ಉದ್ದೇಶದಿಂದ 1,800 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದ ʻನಯಾಮಿ ಗಂಗೆʼ ಯೋಜನೆ ಅಡಿಯಲ್ಲಿ 6 ಒಳಚರಂಡಿ ಸಂಸ್ಕರಣಾ ಘಟಕಗಳನ್ನೂ ಉದ್ಘಾಟಿಸಲಿದ್ದಾರೆ.
ಹೆಚ್ಚುವರಿಯಾಗಿ, ಬಿಹಾರ ರಾಜ್ಯಾದ್ಯಂತ ವಿವಿಧ ಪಟ್ಟಣಗಳಲ್ಲಿ 3,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ನೀರು ಸರಬರಾಜು, ನೈರ್ಮಲ್ಯ ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲದೇ ಮೂಲ ಸೌಕರ್ಯಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 500 ಮೆಗಾವ್ಯಾಟ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (ಬಿಇಎಸ್ಎಸ್)ಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಬಳಿಕ ಬಿಹಾರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ 53,600ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೊದಲ ಕಂತನ್ನು ಬಿಡುಗಡೆ ಮಾಡಲಿದ್ದಾರೆ.

