ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭೇಟಿಯಾದ ಮೋದಿ , ಹೊಸ ಹೈಕಮೀಷನರ್ ನೇಮಿಸಲು ಸಮ್ಮತಿ

ಒಟ್ಟಾವಾ: ಭಾರತ ಮತ್ತು ಕೆನಾಡ ನಡುವಿನ ಸಂಬಂಧ ಸುಧಾರಿಸಿದ್ದು, ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾ ಪ್ರವಾಸ ಕೈಗೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ , ಕೆನಡಾದ ನೂತನ ಪ್ರಧಾನಮಂತ್ರಿ ಮಾರ್ಕ್ ಕಾರ್ನಿ ಅವರನ್ನು ಭೇಟಿ ಮಾಡಿದ್ದಾರೆ.

ಕೆನಡಾ ಪ್ರಧಾನಿ ಭೇಟಿ ವೇಳೆ ಎರಡೂ ದೇಶಗಳ ನಡುವೆ ಸಂಬಂಧ ಸುಧಾರಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿತ್ತು. ಎರಡೂ ದೇಶಗಳು ತಮ್ಮ ಹೈಕಮಿಷನರ್‌ಗಳನ್ನು ವಾಪಸ್ ಕರೆಸಿಕೊಂಡಿದ್ದವು. ಈಗ ಮಾತುಕತೆ ಬಳಿಕ ಭಾರತ ಮತ್ತು ಕೆನಡಾ ಹೊಸ ಹೈಕಮಿಷನರ್‌ಗಳನ್ನು ನೇಮಿಸಲು ಒಪ್ಪಿಕೊಂಡಿವೆ

ಎರಡೂ ದೇಶಗಳು ಸಾಮಾನ್ಯ ರಾಜತಾಂತ್ರಿಕ ಸೇವೆಗಳನ್ನು ಪುನರಾರಂಭಿಸಲು ಹೊಸ ಹೈಕಮಿಷನರ್‌ಗಳನ್ನು ನೇಮಿಸುತ್ತವೆ. ಇದು ಎರಡೂ ದೇಶಗಳ ನಾಗರಿಕರು ಮತ್ತು ಉದ್ಯಮಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಶುದ್ಧ ಇಂಧನ, ಶುದ್ಧ ತಂತ್ರಜ್ಞಾನ, ಡಿಜಿಟಲ್ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ, ಆಹಾರ ಭದ್ರತೆ, ನಿರ್ಣಾಯಕ ಖನಿಜಗಳು ಮತ್ತು ಪೂರೈಕೆ ಸರಪಳಿಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಸಂಭಾವ್ಯ ಸಹಕಾರವನ್ನು ಉಭಯ ನಾಯಕರು ಚರ್ಚಿಸಿದ್ದಾರೆ. ಕೆನಡಾ ಪ್ರವಾಸ ಮುಗಿಸಿದ ಮೋದಿ ಇದೀಗ ಕ್ರೊಯೇಷಿಯಾಗೆ ತೆರಳಿದ್ದಾರೆ.