ಇಂಫಾಲ್: ಮಣಿಪುರದ ಚೂರಚಂದ್‌ಪುರದಲ್ಲಿ ಭದ್ರತಾ ಪಡೆ ಮತ್ತು ಶಸ್ತ್ರಸಜ್ಜಿತ ಗುಂಪಿನ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾಯದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಕುಕಿ ಮತ್ತು ಮೈತೆಯಿ ಸಮುದಾಯಗಳ ನಡುವೆ ಮತ್ತೆ ಘರ್ಷಣೆ ಉಂಟಾಗಿದ್ದು, ಉದ್ವಿಗ್ನತೆಗೆ ಕಾರಣವಾಗಿದೆ.

ಗುರುವಾರ ಮಧ್ಯಾಹ್ನ ಬಿಷ್ಣುಪುರದ ಕಣಿವೆ ಜಿಲ್ಲೆಯ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮೈತೆಯಿ ರೈತನೊಬ್ಬನ ಮೇಲೆ ಬೆಟ್ಟದಲ್ಲಿ ಅವಿತಿದ್ದ ದಾಳಿಕೋರರು ಗುಂಡು ಹಾರಿಸಿದ್ದರು. ಗುಂಡೇಟಿನಿಂದ ರೈತ ಗಾಯಗೊಂಡ ನಂತರ ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಕಾರ್ಯಾಚರಣೆಯ ಸಮಯದಲ್ಲಿ ಭದ್ರತಾ ಪಡೆಗಳ ಮೇಲೆ ಅಪರಿಚಿತ ಶಸ್ತ್ರಸಜ್ಜಿತ ಗುಂಪು ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಯೂ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಮಹಿಳೆಗೆ ಗುಂಡು ತಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯನ್ನು ಲಾಂಗ್‌ಚಿಂಗ್‌ಮನ್ಸಿ ಎನ್ನುವ ಗ್ರಾಮದ ಮುಖ್ಯಸ್ಥನ ಪತ್ನಿ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ಆರೋಪಿಗಳನ್ನು ಸೆರೆ ಹಿಡಿಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಶಾಂತಿ ಕಾಪಾಡಬೇಕು, ಸುಳ್ಳು ಸುದ್ದಿಗಳ ಪ್ರಸಾರವನ್ನು ತಡೆಯಬೇಕು ಎಂದು ಪೊಲೀಸರು ಒತ್ತಾಯಿಸಿದ್ದಾರೆ.
