
ಹೊನ್ನಾವರ ಜೂ19: ತಾಲೂಕಿನ ಮುಗಳಿ ಸಮುದ್ರ ತೀರದ 6 ಕಿ.ಮೀ. ವರೆಗಿನ ಪ್ರದೇಶ ಹಾಗೂ ಅರಣ್ಯ ಪ್ರದೇಶ ಸೇರಿದಂತೆ ಒಟ್ಟು 5959.322 ಹೆಕ್ಟೇರ್ ಪ್ರದೇಶವನ್ನು ‘ಮುಗಳಿ ಕಡಲ ವನ್ಯಜೀವಿಧಾಮ’ ಎಂದು ಘೋಷಣೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ಪ್ರವಾಸೊದ್ಯಮ ಸಚಿವರಾದ ಎಚ್.ಕೆ ಪಾಟೀಲ ತಿಳಿಸಿದ್ದಾರೆ.

ತಾಲೂಕಿನ ಅಪ್ಸರಕೊಂಡದಿಂದ ಮುಗಳಿ, ಮಂಕಿ ಮಡಿಯವರೆಗಿನ 6 ಕಿ.ಮೀ. ಉದ್ದದ ಕಡಲತೀರ ಮತ್ತು ದಂಡೆಯ ಪ್ರದೇಶ ದೇಶದ 7ನೇಯ ಮತ್ತು ರಾಜ್ಯದ ಮೊದಲನೇಯ ಸಮುದ್ರದ ಅಭಯಾರಣ್ಯವಾಗಿ ಘೋಷಿಸಲ್ಪಿಟ್ಟಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದ ವನ್ಯಜೀವಿ ಮಂಡಳಿ ಈ ಹಿಂದೆಯೆ ಒಪ್ಪಿಗೆ ನೀಡಿ, ಸಚಿವ ಸಂಪುಟದ ಮುಂದಿಟ್ಟಿತ್ತು. ಈ ಅಭಯಾರಣ್ಯ 5960 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದ್ದು, 835.02 ಹೆಕ್ಟೇರ್ ಸಮುದ್ರ ಪ್ರದೇಶವಾಗಿದ್ದು 835 ಹೆಕ್ಟೇರ್ ಭೂಪ್ರದೇಶವಾಗಿದೆ. ಈ ಪ್ರದೇಶವು 5400 ಹೆಕ್ಟೇರ್ ಕಾಂಡ್ಲಾ ಕಾಡು ಹೊಂದಿದ್ದು ಹಂಪ್ ಬ್ಯಾಕ್ ತಿಮಿಂಗಲುಗಳು, ಸ್ಪಾಟ್‌ಲೈಟ್ ಶಾರ್ಕ್ ಗಳು, ಆಲಿವ್ ರಿಡ್ಲೆ ಆಮೆ ಮರಿಗಳು ಮತ್ತು 80 ಜಾತಿಯ ಸಮುದ್ರ ಪಕ್ಷಿಗಳಂತಹ ಅಳಿವಿನ ಅಂಚಿನಲ್ಲಿರುವ ಪ್ರಬೇಧಗಳನ್ನು ಹೊಂದಲಿದೆ. ನೇತ್ರಾಣಿ ದ್ವೀಪದ ಬಳಿ 14 ಜಾತಿಯ ಹವಳದ ದಿಬ್ಬ, 50ಕ್ಕೂ ಹೆಚ್ಚು ಪೈಟೋಪ್ಲಾಂಕ್ಟನ್ ಮತ್ತು 100ಕ್ಕೂ ಹೆಚ್ಚು ಝೂಪ್ಲಾಂಕ್ಟನ್ ಪ್ರಬೇಧಗಳು, 2 ಜಾತಿಯ ಸಮುದ್ರ ಹುಲ್ಲುಗಳು, 100ಕ್ಕೂ ಹೆಚ್ಚು ಕಡಲ ಕಳೆಗಳು ಸಹ ಅಭಯಾರಣ್ಯದ ಭಾಗವಾಗಿದೆ..

ಈ ವನ್ಯಜೀವಿಧಾಮ ನಿರ್ಮಾಣವಾದರೆ, ವಿಜ್ಞಾನಿಗಳು ಅಧ್ಯಯನಕ್ಕೆ ಆಗಮಿಸಲಿದ್ದು, ಪ್ರವಾಸೊದ್ಯಮಕ್ಕೆ ಪೂರಕವಾಗಿ ಉದ್ಯೋಗ ಸೃಷ್ಠಿಯಾಗಲಿದೆ. ಈಗಾಗಲೇ ಕಾಂಡ್ಲಾವನ, ಇಕೋಬೀಚ್, ಅಪ್ಸರಕೊಂಡದಂತಹ ಪ್ರವಾಸಿತಾಣಗಳ ಸಾಲಿಗೆ ಹೊಸದಾಗಿ ಇದು ಸೆರ್ಪಡೆಯಾಗಲಿದೆ. ಈ ಹಿಂದೆ ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಈ ಪ್ರಸ್ತಾವನೆಯನ್ನು ಒಪ್ಪಿ ಬಜೆಟ್‌ನಲ್ಲಿ ಒಂದು ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದರು. ಕೊವೀಡ್ ಕಾರಣ ಈ ಪ್ರಸ್ತಾವನೆ ಮುಂದೆ ಹೋಗಿತ್ತು. ಹೊನ್ನಾವರದಲ್ಲಿ ಈ ಹಿಂದೆ ಅರಣ್ಯಾಧಿಕಾರಿಗಳಾಗಿದ್ದ ಕೃಷ್ಣ ಉದುಪುಡಿ, ಅಪ್ಸರಕೊಂಡ, ಇಕೋ-ಬಿಚ್, ವಿನಾಯಕವನ, ಪವಿತ್ರವನ ರಚಿಸಿ ಪ್ರವಾಸೋದ್ಯಮಕ್ಕೆ ಚಾಲನೆ ನೀಡಿದ್ದರು. ನಂತರ ಬಂದ ಅರಣ್ಯಾಧಿಕಾರಿ ವಸಂತ ರೆಡ್ಡಿ ಈ ಯೋಜನೆಗಳನ್ನು ವಿಸ್ತರಿಸಿದರು. ಈಗಿನ ಅರಣ್ಯ ಅಧಿಕಾರಿ ಯೋಗೀಶ ರಾಜ್ಯದಲ್ಲಿ ಪ್ರಥಮ ಕಡಲವನ್ಯಜೀವಿ ಧಾಮಕ್ಕೆ ಶ್ರಮಿಸುವುದರಿಂದ ಇಂದು ಮುಗಳಿ ಕಡಲ ವನ್ಯಜೀವಿಧಾಮ’ ಘೊಷಣೆಯಾಗಿದೆ.

ಕೆಳಗಿನೂರು ವಿ.ಎಸ್.ಎಸ್ ಅಧ್ಯಕ್ಷರು, ಸಹಾಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಗಣಪಯ್ಯ ಗೌಡ, ಯಕ್ಷಗಾನ ಕಲಾವಿದರಾದ ಕೆರಮನೆ ಶಿವಾನಂದ ಹೆಗಡೆ, ಹೊಟೆಲ್ ಉದ್ದಿಮೆದಾರರಾದ ಮರಿ ಭಟ್, ಗುಣವಂತೆ, ಮುಗಳಿ ಅಪ್ಸರಕೊಂಡ ಭಾಗದ ಸಾರ್ವಜನಿಕರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ




