ಬಾಂಬ್ ಬೆದರಿಕೆ ಕರೆ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ; ಇದು ಹುಸಿ ಬಾಂಬ್​ ಕರೆ ಎಂದು ಪೊಲೀಸರ ಸ್ಪಷ್ಟನೆ

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆಗೆ ಹುಸಿ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಯಿತು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಬುಧವಾರ ರಾತ್ರಿ ಭಯೋತ್ಪಾದಕನ ಹೆಸರಿನಲ್ಲಿ ಕಳುಹಿಸಲಾದ ಇಮೇಲ್‌ನಲ್ಲಿ ಎರಡು ಬಾಂಬ್‌ಗಳನ್ನು ಇಡಲಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಒಂದು “ಪ್ಲಾನ್ ಎ” ನ ಭಾಗವಾಗಿ ಮೊದಲನೇ ಬಾಂಬ್ ಇಡುವುದಾಗಿ ಹಾಗೂ ಒಂದು ವೇಳೆ ಮೊದಲನೆಯದು ವಿಫಲವಾದರೆ “ಪ್ಲಾನ್ ಬಿ” ಅಡಿಯಲ್ಲಿ ಎರಡನೇಯ ಬಾಂಬ್ ಇಡುವ ಬಗ್ಗೆ ಇಮೇಲ್​​ನಲ್ಲಿ ತಿಳಿಸಲಾಗಿತ್ತು.

ವಿಮಾನ ನಿಲ್ದಾಣದ ಶೌಚಾಲಯದ ಪೈಪ್‌ಲೈನ್‌ನೊಳಗೆ ಸ್ಫೋಟಕ ಸಾಧನ ಇರಿಸಲಾಗಿದೆ ಎಂದು ಇ-ಮೇಲ್​ ನಲ್ಲಿ ಉಲ್ಲೇಖ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಒಂದೇ ವಾರದಲ್ಲಿ ಎರಡನೇ ಬಾರಿ ಹುಸಿ ಬಾಂಬ್​

ನಗರದಲ್ಲಿ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಹುಸಿ ಬಾಂಬ್ ಮೇಲ್​ಗಳು ಮತ್ತೆ ಆಕ್ಟೀವ್​ ಆಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಮತ್ತೊಂದು ಹುಸಿ ಬಾಂಬ್​ ಮೇಲ್​ ಬಂದಿದೆ. ಒಂದೇ ವಾರದಲ್ಲಿ ಇದು ಎರಡನೇ ಹುಸಿ ಬಾಂಬ್​ ಮೇಲ್ ಆಗಿದೆ. ಜೂ.13, 16ರಂದು ಎರಡು ಬಾಂಬ್​ ಬೆದರಿಕೆ ಇ-ಮೇಲ್ ಬಂದಿತ್ತು.

ಬೆದರಿಕೆ ಮೇಲ್ ಹಿನ್ನೆಲೆ‌ ಎಲ್ಲೆಡೆ ಪರಿಶೀಲನೆ ಮಾಡಿದ ಅಧಿಕಾರಿಗಳು ಬಳಿಕ ಇದೊಂದು ಹುಸಿ ಬಾಂಬ್ ಮೇಲ್ ಎಂದು ತಿಳಿಸಿದ್ದಾರೆ. ಸದ್ಯ ಕೆಂಪೇಗೌಡ ಏರ್​​​ಪೋರ್ಟ್ ಪೊಲೀಸರು ಮತ್ತು ಅಧಿಕಾರಿಗಳಿಗೆ ಈ ಹುಸಿ‌ ಬಾಂಬ್ ಮೇಲ್ ಮತ್ತು ಕರೆಗಳು ತಲೆ ನೋವಾಗಿದ್ದು, ಹುಸಿ‌ ಬಾಂಬ್ ಬೆದರಿಕೆ ಬಂದ ಮೇಲ್ ಐಡಿಗಳ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.