
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಪ್ರೀಮಿಯರ್ ಲೀಗ್ನ 8ನೇ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ವಿಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಕ್ಯಾಲಿಫೋರ್ನಿಯಾದ ಒಕ್ಲ್ಯಾಂಡ್ ಕೊಲಿಸಿಯಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ಹಾಗೂ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವಾಷಿಂಗ್ಟನ್ ಫ್ರೀಡಂ ಉತ್ತಮ ಆರಂಭ ಪಡೆದಿರಲಿಲ್ಲ. ಅಲ್ಲದೆ 64 ರನ್ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಪೆವಿಲಿಯನ್ ಸೇರಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ ಅಕ್ಷರಶಃ ಅಬ್ಬರಿಸಿದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ಮ್ಯಾಕ್ಸಿ 15 ಓವರ್ಗಳು ಕಳೆಯುತ್ತಿದ್ದಂತೆ ಸಿಡಿಲಬ್ಬರವನ್ನು ಶುರು ಮಾಡಿದ್ದರು.
ಪರಿಣಾಮ 29 ಎಸೆತಗಳಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟ್ನಿಂದ ಅರ್ಧಶತಕ ಮೂಡಿಬಂತು. ಹಾಫ್ ಸೆಂಚುರಿ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ ಮ್ಯಾಕ್ಸಿ ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಇದರಿಂದಾಗಿ 19 ಎಸೆತಗಳಲ್ಲಿ ಮತ್ತೊಂದು 50 ರನ್ ಮೂಡಿಬಂತು. ಈ ಮೂಲಕ ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿದರು.
ಅಲ್ಲದೆ 49 ಎಸೆತಗಳಲ್ಲಿ 13 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 106 ರನ್ ಬಾರಿಸುವ ಮೂಲಕ ಅಜೇಯರಾಗಿ ಉಳಿದರು. ಮ್ಯಾಕ್ಸ್ವೆಲ್ ಅವರ ಈ ಸಿಡಿಲಬ್ಬರದ ಸೆಂಚುರಿ ನೆರವಿನಿಂದ ವಾಷಿಂಗ್ಟನ್ ಫ್ರೀಡಂ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿದೆ. ಈ ಮೂಲಕ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಕ್ಕೆ 209 ರನ್ಗಳ ಗುರಿ ನೀಡಿದೆ.
ಅಂದಹಾಗೆ ಈ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಗ್ಲೆನ್ ಮ್ಯಾಕ್ಸ್ವೆಲ್ 7 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 48 ರನ್ಗಳು ಮಾತ್ರ. ಈ ವೇಳೆ ಅವರ ಬ್ಯಾಟ್ನಿಂದ ಮೂಡಿಬಂದ ಸಿಕ್ಸರ್ಗಳ ಸಂಖ್ಯೆ ಕೇವಲ ಒಂದು. ಇನ್ನು 2024 ರಲ್ಲಿ ಆರ್ಸಿಬಿ ಪರ 10 ಪಂದ್ಯವಾಡಿದ್ದ ಮ್ಯಾಕ್ಸ್ವೆಲ್ 2 ಸಿಕ್ಸರ್ಗಳೊಂದಿಗೆ ಒಟ್ಟು 52 ರನ್ ಮಾತ್ರ ಕಲೆಹಾಕಿದ್ದರು. ಆದರೀಗ ಮೇಜರ್ ಲೀಗ್ ಟಿ20 ಟೂರ್ನಿಯ ಒಂದೇ ಪಂದ್ಯದಲ್ಲೇ 13 ಸಿಕ್ಸ್ ಸಿಡಿಸಿ ಸ್ಫೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ.


