
ಬೆಂಗಳೂರು: ಇತ್ತ ಕಾಲ್ತುಳಿತಕ್ಕೆ ಜನ ಸಾವಿಗೀಡಾಗಿದ್ದರೆ, ಅತ್ತ ಸಿಎಂ ಸಿದ್ದರಾಮಯ್ಯ ಹೊಟೇಲ್ನಲ್ಲಿ ದೋಸೆ, ಹಲ್ವಾ ತಿನ್ನುತ್ತಿದ್ದರು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು. ಘಟನೆ ನಡೆದ ಬಳಿಕ ಸಿಎಂ ಎಲ್ಲಿ ಹೋಗಿದ್ದರು ಎಂದು ಕೇಳಲಾಗುತ್ತಿದೆ. ನನ್ನ ಮಾಹಿತಿ ಪ್ರಕಾರ ಸಂಜೆ 3.45 ಗಂಟೆಗೆ ಸಾವಾಗಿದೆ. ಸಾವಾಗಿರುವುದು ಗೊತ್ತಾಗಿದ್ದರೂ ಸಿಎಂ ಸಿದ್ದರಾಮಯ್ಯ ಜನಾರ್ದನ ಹೊಟೇಲ್ನಲ್ಲಿ ದೋಸೆ, ಬದಾಮ ಹಲ್ವಾ ತಿನ್ನಲು ಹೋಗಿದ್ದಾರೆ. ನಿಮಗೆ ನಾಚಿಕೆ ಆಗಲ್ವಾ?. ರೋಮ್ಗೆ ಬೆಂಕಿ ಬಿದ್ದರೂ ಮಹಾರಾಜ ಪಿಟೀಲು ಬಾರಿಸುತ್ತಿದ್ದರಂತೆ. ಹಾಗಾಯ್ತು. ಸೂತಕದ ಮನೆಯಲ್ಲಿ ಪಂದ್ಯ ಶ್ರೇಷ್ಠ ಯಾರು ಅನ್ನೋ ತರ ಆಗಿದೆ ಎಂದು ಆರೋಪಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದವರು ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಏಕೆ ಬಂದರು?. ವಿಶೇಷ ವಿಮಾನ ವ್ಯವಸ್ಥೆ ಮಾಡಿದವರು ಯಾರು?. ಐಪಿಎಲ್ ತಂಡದಲ್ಲಿ ಸರ್ಕಾರದ ಬಂಡವಾಳ ಹೂಡಿಕೆ ಇದೆಯಾ?. ಸಂಭ್ರಮಾಚರಣೆ ಆರ್ಸಿಬಿಯವರು ಮಾಡಬೇಕಿತ್ತು. ಕಾಲ್ತುಳಿತಕ್ಕೆ 11 ಜನ ಸಾವಿಗೀಡಾಗಿದ್ದಾರೆ. ನಮ್ಮ ಕ್ರಿಕೆಟ್ ಟೀಂ ಹೋಯ್ತಲ್ಲ. ವಿಧಾನಸೌಧವನ್ನು ಡಬ್ಬಾ ಅಂಗಡಿ ಮಾಡಿದ್ದಾರೆ. ಅನೇಕರ ತಿಥಿಗಳೂ ಇಲ್ಲಿ ಆಗುತ್ತವೆ. ಕುಟುಂಬ ಸದಸ್ಯರನ್ನು ಕರೆದುಕೊಂಡು ಬಂದಿದ್ದಾರೆ. ಈ ಕಾರ್ಯಕ್ರಮದಿಂದ 11 ಜನ ಸತ್ತಿದ್ದಾರೆ ಎಂದು ಕಿಡಿ ಕಾರಿದರು.
ಪೊಲೀಸರು ಅನುಮತಿ ನಿರಾಕರಿಸಿದ್ದರು: ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯದ ಇತಿಹಾಸದಲ್ಲಿ ಕೇಳರಿಯದ ಕಂಡರಿಯದಂತೆ 11 ಸಾವಾಗಿದೆ. ಕಪ್ಪು ನಮ್ದೇ, ತಪ್ಪು ಯಾರದು?. ರಾಜ್ಯದ ಏಳು ಕೋಟಿ ಜನ ಕೇಳುತ್ತಿದ್ದಾರೆ. ಈ ಕಾಲ್ತುಳಿತ ಸರ್ಕಾರದ ಪ್ರಯೋಜಿತ ಅಮಾಯಕರ ಕೊಲೆಯಾಗಿದೆ. ಆತುರದ ನಿರ್ಧಾರ ಇದು. ಐಪಿಎಲ್ ಅಧ್ಯಕ್ಷ ಈ ಘಟನೆ ನಮಗೆ ಗೊತ್ತೇ ಇಲ್ಲ ಅಂದಿದ್ದಾರೆ. ಬೆಂಗಳೂರಲ್ಲಿ ಕಾರ್ಯಕ್ರಮ ಆಯೋಜನೆ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಕೆಎಸ್ಸಿಎ ಸರ್ಕಾರ ಸ್ಟೇಡಿಯಂ ಕೇಳಿದೆ ಅದಕ್ಕೆ ಕೊಟ್ವಿ ಅಂದಿದ್ದಾರೆ. ಕಾರ್ಯಕ್ರಮವನ್ನು ವಿಧಾನಸೌಧಕ್ಕೆ ತಂದವರು ಯಾರು?. ಆ ಪುಣ್ಯಾತ್ಮನ ಹೆಸರನ್ನು ಸುವರ್ಣಕಾಶದಲ್ಲಿ ಬರೆಯಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು ಎಂಬ ಮಾಹಿತಿ ನನಗೆ ಬಂದಿದೆ. ಇದು ನಿಯಂತ್ರಿತ ಪ್ರದೇಶವಾಗಿದೆ. ಡ್ರೋನ್ ಬಳಕೆ ಮಾಡಿದ್ದಾರೆ. ಆದರೆ ಸರ್ಕಾರ ಮುಟ್ಟಾಳತನ ಪ್ರದರ್ಶನ ಮಾಡಿದೆ. ಹೈಕೋರ್ಟ್ ಕಟ್ಟಡದ ಮೇಲೆ ಹೋಗಿ ಕೆಲವರು ನಿಂತಿದ್ದಾರೆ. ಈಗ ಕೋರ್ಟ್ ಕೂಡ ಸ್ವಯಂಪ್ರೇರಿತ ಕೇಸ್ ತೆಗೆದುಕೊಂಡಿದೆ. ಸಿಎಂ ನಮಗೆ ಇಷ್ಟು ಜನ ಬರ್ತಾರೆ ಅಂದಾಜು ಇಲ್ಲ ಅಂತಾರೆ. ಈ ಸರ್ಕಾರಕ್ಕೆ ಕಾಮನ್ ಸೆನ್ಸ್ ಬೇಕಲ್ಲ. ಇದು ಸುಲಭ ಗಣಿತವಾಗಿದೆ ಎಂದರು.
ಇದ್ದದ್ದು 12 ಗೇಟ್ ತೆರೆದದ್ದು 2 ಗೇಟ್ ಮಾತ್ರ: ಕೆಎಸ್ಸಿಎ ನಲ್ಲಿ 12 ಗೇಟ್ ಇತ್ತು. ನೀವು ಗೇಟ್ ತೆಗೆದಿದ್ದು 2 ಮಾತ್ರ. ಡಿಕೆ ಶಿವಕುಮಾರ್ ನಿಮಗೆ ಕಾರಿನ ಕಿಟಕಿಯಿಂದ ಬಾವುಟ ಹಿಡಿದು, ತಲೆ ಹೊರಗೆ ಹಾಕಲು ಪರ್ಮಿಷನ್ ಕೊಟ್ಟವರು ಯಾರು?. ನೀವು ಯಾರ ಮೇಲೆ ಕೇಸ್ ಹಾಕುತ್ತೀರ?. ಯಾರನ್ನು ಬಂಧಿಸುತ್ತೀರ?. ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಆಂಬ್ಯುಲೆನ್ಸ್ ಕೂಡ ಇರಲಿಲ್ಲ. ಮೊದಲು ಮೃತಪಟ್ಟಿದ್ದು ಪೂರ್ಣಚಂದ್ರ ಸಂಜೆ 3.45ಕ್ಕೆ. ಅಷ್ಟೊತ್ತಿಗೆ ಇಲ್ಲಿ ಕಾರ್ಯಕ್ರಮವೇ ಆರಂಭವಾಗಿರಲಿಲ್ಲ. ಎರಡನೇ ಡೆತ್ ಆಗಿದ್ದು ಸಂಜೆ 4.38ಕ್ಕೆ, ಇನ್ನೊಂದು ಡೆತ್ ಆಗಿರುವುದು ಸಂಜೆ 4.45ಕ್ಕೆ. ಎಲ್ಲಾ ಐಎಎಸ್, ಐಪಿಎಸ್, ಮಿನಿಸ್ಟರ್ ಪಟಾಲಂ ಮಕ್ಕಳು, ಮೊಮ್ಮಕಳೊಂದಿಗೆ ಫೋಟೋ ಶೂಟ್ನಲ್ಲಿ ಬಿಜಿಯಾಗಿದ್ದರು. ಅವರ ಮಕ್ಕಳು, ಮೊಮ್ಮಕ್ಕಳನ್ನು ಕರೆತಂದು ಫೋಟೋ ಶೂಟ್ ಮಾಡಿಸಿದ್ದಾರೆ. ಕೊಹ್ಲಿಯ ಬಟ್ಟೆ ಎಳೆಯುವುದೊಂದು ಬಾಕಿ ಇತ್ತು ಎಂದು ಟೀಕಿಸಿದರು.
ನಿಮ್ಮ ಫೋಟೋ ಶೂಟ್ಗಾಗಿ ವಿದ್ಯಾರ್ಥಿಗಳ ಬಲಿ ತೆಗೆದುಕೊಂಡಿದ್ದಾರೆ. ಘಟನೆ ಆದ ಬಳಿಕ ಸಿಎಂ ಎಲ್ಲಿ ಹೋಗಿದ್ದರು ಎಂಬುದೇ ಗೊತ್ತಿಲ್ಲ. ಡಿಸಿ ತನಿಖೆಗೆ ನಾವು ಒಪ್ಪಲ್ಲ. ಸಾವಿಗೆ ನ್ಯಾಯ ಕೊಡಿ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಈ ಹೊಣೆಯನ್ನು ರಾಜ್ಯ ಸರ್ಕಾರ, ಸಿಎಂ, ಡಿಸಿಎಂ ಹೊತ್ತು. ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಡಿಕೆಶಿ ನಿನ್ನೆನೇ ಕಣ್ಣೀರು ಹಾಕಬೇಕಿತ್ತು: ಡಿಸಿಎಂ ಡಿ.ಕೆ.ಶಿವಕುಮಾರ್ ಕಣ್ಣೀರು ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಡಿಕೆಶಿ ಇಂದು ಕಣ್ಣೀರು ಹಾಕುವ ಬದಲು. ನಿನ್ನೆ ಸಾವು ಸುದ್ದಿ ಗೊತ್ತಾದ ಬಳಿಕ ಸಂಭ್ರಮಾಚರಣೆ ಹೋಗಿದ್ರಲ್ಲ. ನಿನ್ನೆನೇ ಕಣ್ಣೀರು ಹಾಕಬೇಕಿತ್ತು. ಡಿಕೆಶಿಗೆ ದುರಂತದ ಬಗ್ಗೆ ಗೊತ್ತಾಗಿದೆ. ಅವರು ಈ ಪರಿಸ್ಥಿತಿಯಲ್ಲಿ ಸಂಭ್ರಮಾಚರಣೆ ಮಾಡಿರುವುದು ಆ ಸ್ಥಾನದಲ್ಲಿರಲು ಅವರು ಅನ್ ಫಿಟ್ ಎಂದು ವಾಗ್ದಾಳಿ ನಡೆಸಿದರು.
ತರಾತುರಿಯಲ್ಲಿ ಸಂಭ್ರಮಾಚರಣೆಗೆ ಅವಕಾಶ ನೀಡಿದ್ದೇಕೆ?: ತರಾತುರಿಯಲ್ಲಿ ಏಕೆ ಸಂಭ್ರಮಾಚರಣೆಗೆ ಅವಕಾಶ ನೀಡಿದರು. ರಾಜ್ಯ ಸರ್ಕಾರಕ್ಕೆ ಸಿಎಂ, ಡಿಸಿಎಂಗೆ ವಿಧಾನಸೌಧ ಮುಂದೆ ಸಂಭ್ರಮ ಮಾಡುವ ಅವಶ್ಯಕತೆ ಏನಿತ್ತು?. ಈ ತೀರ್ಮಾನ ಸಿಎಂ ಮಾಡಿದರೋ, ಡಿಸಿಎಂ ಮಾಡಿದರೋ?. ಆರ್ಸಿಬಿ ಟೀಂ ಹೊಟೇಲ್ನಿಂದ ಹೊರಡುವ ಮುನ್ನ ಆಗಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಆರಂಭವಾಗಿತ್ತು ಎಂಬ ವರದಿ ಬಂದಿತ್ತು. ಆದರೂ ಸಂಭ್ರಮಾಚರಣೆ ಅವಶ್ಯಕತೆ ಏನಿತ್ತು. ಸಾವು ನೋವು ಆದಾಗಲೂ ವಿಧಾನಸೌಧದ ಮುಂದೆ ಸಂಭ್ರಮಾಚರಣೆ ಏಕೆ ಮಾಡಿದರು?. ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಡಿಸಿಎಂ ಕಪ್ಗೆ ಮುತ್ತಿಕ್ಕುತ್ತಾರೆ. ಸಿಎಂ ನಾವು ನಿರೀಕ್ಷೆ ಮಾಡಿಲ್ಲ ಅಂತಾರೆ. ಅದೇ ಅವರ ವೈಫಲ್ಯಕ್ಕೆ ಪುರಾವೆಯಾಗಿದೆ. ನಿಮ್ಮ ಸಿದ್ಧತೆ ಏನಿದೆ ಎಂದು ಟೀಕಿಸಿದರು.
ನೀವು ವಿಧಾನಸೌಧದಲ್ಲಿ ಏನು ಆಗಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಗಿರುವುದು ಎನ್ನುವ ಮೂಲಕ ನುಣುಚಿಕೊಳ್ಳಲು ಆಗಲ್ಲ. ನಿನ್ನೆಯ ಘಟನೆಗೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕು. ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದೆವು. ಆದರೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿದ್ದಾರೆ. ಇವರಿಗೆ ಜನರ ರಕ್ಷಣೆ ಬದಲಿಗೆ ಪ್ರಚಾರವೇ ಹೆಚ್ಚಾಯಿತು. ಪ್ರಚಾರದ ಹುಚ್ಚು ಇದಕ್ಕೆ ಕಾರಣವಾಗಿದೆ. ಮ್ಯಾಜಿಸ್ಟ್ರೇಟ್ನಿಂದ ತನಿಖೆ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಸಿಎಂ, ಮಂತ್ರಿಮಂಡಲದ ಸಚಿವರು ಕೂಡ ಅಪರಾಧಿ ಸ್ಥಾನದಲ್ಲಿದ್ದಾರೆ. ಹಾಲಿ ನ್ಯಾಯಮೂರ್ತಿಯಿಂದ ನ್ಯಾಯಾಂಗ ತನಿಖೆ ಆಗಬೇಕು. ಸಿಎಂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಾರದು. ಪರಿಹಾರ 10 ಲಕ್ಷ ಘೋಷಣೆ ಮಾಡಿದ್ದಾರೆ. ಪಕ್ಕದ ಕೇರಳದಲ್ಲಿ ರಾಜ್ಯದ ಆನೆ ತುಳಿದು ಸಾಯಿಸಿದೆ ಅಂತ 25 ಲಕ್ಷ ಪರಿಹಾರ ನೀಡಿದ್ದಾರೆ. ಇಲ್ಲಿ ಕನಿಷ್ಟ 50 ಲಕ್ಷ ರೂ.ಪರಿಹಾರ ಕೊಡಬೇಕು. ಆರ್ಸಿಬಿ ಮಾಲೀಕರು ಇದಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಕಬ್ಬನ್ ಪಾರ್ಕ್ ಸ್ಟೇಷನ್ನಲ್ಲಿ ಈ ಸಾವುಗಳ ಬಗ್ಗೆ ಯುಡಿಆರ್ ಹಾಕಿದ್ದಾರೆ. ಇದು ಅಸಹಜ ಸಾವಲ್ಲ. ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯವಾಗಿದೆ. ಸಿಎಂ, ಡಿಸಿಎಂ ರಾಜೀನಾಮೆ ಕೊಡುವ ಪರಿಸ್ಥಿತಿ ಉದ್ಭವವಾಗಿದೆ. ತೆಲಂಗಾಣ ಘಟನೆ ಸಂಬಂಧ ಅಲ್ಲು ಅರ್ಜುನ್ ಪ್ರಚಾರದ ವೇಳೆ ಕಾಲ್ತುಳಿತದಿಂದ ಸಾವಾಗಿದ್ದಕ್ಕೆ ತಕ್ಷಣ ಅಲ್ಲು ಅರ್ಜುನರನ್ನು ಬಂಧಿಸಿಲ್ವಾ?. ಅದೇ ರೀತಿ ಕ್ರಮ ಇಲ್ಲೂ ಆಗಬೇಕು ಎಂದು ಕಿಡಿಕಾರಿದರು.


