ಇನ್ಮುಂದೆ ಇಂದಿರಾ ಕ್ಯಾಂಟೀನ್ ಮೆನ್ಯೂನಲ್ಲಿ ಸಿಗಲಿದೆ ಮೊಟ್ಟೆ: ಸುಳಿವು ನೀಡಿದ ಸಚಿವರು

ದಾವಣಗೆರೆ: ಇಂದಿರಾ ಕ್ಯಾಂಟೀನ್​​​​​​ ಬಡವರ ಹಸಿವು ನೀಗಿಸುವ ತಾಣವಾಗಿದೆ. 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಡವರಿಗಾಗಿ ಆರಂಭಿಸಿದ ಯೋಜನೆ ಇದಾಗಿದೆ. ಇಲ್ಲಿ ತನಕ ಕ್ಯಾಂಟಿನ್​​ ಮೆನ್ಯೂ ಅಲ್ಲಿ ಅನ್ನ ಸಾಂಬಾರ್​​, ಚಪಾತಿ, ತಿಂಡಿ ಕೇವಲ 10 ರೂಪಾಯಿಗೆ ಕೊಡಲಾಗುತ್ತಿತ್ತು. ಇದೀಗ ಸರ್ಕಾರ ಜನರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಊಟದ ಮೆನ್ಯೂ ಅಲ್ಲಿ ಮೊಟ್ಟೆ ಕೊಡಲು ನಿರ್ಧರಿಸಿದೆ. ಈ ಬಗ್ಗೆ ಸ್ವತಃ ಪೌರಾಡಳಿತ ಸಚಿವ ರಹೀಂ ಖಾನ್​ ಸುಳಿವು ನೀಡಿದ್ದಾರೆ.

ಮಾಧ್ಯಮಕ್ಕೆ ಸಚಿವ ರಹೀಂ ಖಾನ್ ಪ್ರತಿಕ್ರಿಯಿಸಿ “ಮೊಟ್ಟೆ ಕೊಡಬೇಕೆಂದು ನಿರ್ಧರಿಸಲಾಗಿದೆ. ಊಟದ ಜತೆ ಜನರಿಗೆ ಪ್ರೋಟೀನ್​​​​ ನೀಡುವ ಉದ್ದೇಶದಿಂದ ನಮ್ಮ ಸರ್ಕಾರದ ವತಿಯಿಂದ ಮೊಟ್ಟೆ ಕೊಡಬೇಕೆಂದುಕೊಂಡಿದ್ದೇವೆ” ಎಂದರು.

ಜನಸಾಮಾನ್ಯರ ಬಿಲ್​ಗೆ ಮನವಿ: ಕೇಂದ್ರ ಸರ್ಕಾರ ವಿವಾದಿತ ಬಿಲ್​(ಮಸೂದೆ)ಗಳನ್ನು ತರುವ ಬದಲು ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಬಿಲ್​ ತರಲಿ.‌ ಅಲ್ಲದೆ ಸಿಗರೇಟ್​, ಕುಡಿತ, ಗುಟ್ಕಾ ಚಟದಿಂದ ಜನತೆ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿವಾಹಿತ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಿಗರೇಟ್, ಕುಡಿತ, ಗುಟ್ಕಾ ವಿರುದ್ಧ ಬಿಲ್ ತಂದು ಜನರಿಗೆ ಆಸರೆ ಆಗಿ” ಎಂದು ಮನವಿ ಮಾಡಿದರು.

ಮುಂದುವರೆದು, “ಇಂದಿರಾ ಕ್ಯಾಂಟೀನ್ ಯೋಜನೆ ಸಿದ್ದರಾಮಯ್ಯ ಅವರ ಕನಸಿನ ಯೋಜನೆ. ಅವರು 2013ರಲ್ಲಿ ಸಿಎಂ ಆಗಿದ್ದಾಗ 196 ಕ್ಯಾಂಟೀನ್ ಗಳನ್ನು ತೆರೆದರು. ನಮ್ಮ‌ ಸರ್ಕಾರ ಇರುವ ತನಕ ಈ ಇಂದಿರಾ ಕ್ಯಾಂಟೀನ್​ಗಳು ಚೆನ್ನಾಗಿ ನಡೆದವು. ತದನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಬಳಿಕ ಸಮಸ್ಯೆಗೆ ಸಿಲುಕಿದವು. ನಂತರ ಸಿಎಂ ಆಗಿ ಸಿದ್ದರಾಮಯ್ಯ ಅವರು ನೇಮಕ ಆದ ಬಳಿಕ ಮುಚ್ಚಿದ ಕ್ಯಾಂಟೀನ್​ಗಳನ್ನು ತೆರೆಸಿದರು. ಇದೀಗ ಮತ್ತೆ 186 ನೂತನ ಇಂದಿರಾ ಕ್ಯಾಂಟೀನ್​ಗಳನ್ನು ತೆರೆದಿದ್ದೇವೆ” ಎಂದು ರಹೀಂ ಖಾನ್ ತಿಳಿಸಿದರು.

ದಾವಣಗೆರೆಯಲ್ಲಿರುವ ಕ್ಯಾಂಟೀನ್​ಗಳೆಷ್ಟು: ದಾವಣಗೆರೆ ನಗರದಲ್ಲಿನ ಎಂಟು ಇಂದಿರಾ ಕ್ಯಾಂಟೀನ್​, ಚನ್ನಗಿರಿಯ 1, ಮಲೇಬೆನ್ನೂರು 1, ಹರಿಹರದ 1 ಕ್ಯಾಂಟೀನ್​ ಸೇರಿ ಒಟ್ಟು 11 ಇವೆ. ಈ ಬಗ್ಗೆ ಪಾಲಿಕೆ ಆಯುಕ್ತೆ ರೇಣುಕಾ ಅವರು ದೂರವಾಣಿಯಲ್ಲಿ ಮಾತನಾಡಿ, “ನಗರದಲ್ಲಿ ಒಟ್ಟು 8 ಕ್ಯಾಂಟೀನ್​ಗಳಿವೆ. ಅವುಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಬೆಳಗ್ಗೆ ರೈಸ್ ಬಾತ್, ಇಡ್ಲಿ, ಚಿತ್ರಾನ್ನ ಹೀಗೆ ಬೇರೆ ತಿಂಡಿಗಳನ್ನು ಕೊಡುತ್ತಿವೆ. ಮಧ್ಯಾಹ್ನ ಚಪಾತಿ ಊಟ ಕೊಡಲಾಗುತ್ತದೆ.‌ ಇದನ್ನು ಪಾಲಿಕೆ ನಿರ್ವಹಣೆ ಮಾಡುತ್ತಿದೆ. ದಿನನಿತ್ಯ ಒಬ್ಬರು ಅಧಿಕಾರಿ ಪ್ರತಿಯೊಂದು ಕ್ಯಾಂಟೀನ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ” ಎಂದು ಮಾಹಿತಿ ನೀಡಿದ್ದಾರೆ.