ಬೆಂಗಳೂರು ಕಾಲ್ತುಳಿತದಲ್ಲಿ ಉತ್ತರ ವಿಭಾಗದ ಡಿಸಿಪಿಗೂ ಗಾಯ

ಬೆಂಗಳೂರು: ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ಐಪಿಎಲ್​ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ‌ದ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಅವರೂ ಸಹ ಗಾಯಗೊಂಡಿದ್ದಾರೆ.

ಬುಧವಾರ ಮಧ್ಯಾಹ್ನ ಕ್ರೀಡಾಂಗಣದ ಗೇಟ್ ನಂಬರ್ 19ರ ಬಳಿ ಸೈದುಲು ಅಡಾವತ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅದೇ ಸಂದರ್ಭದಲ್ಲಿ, ಏಕಾಏಕಿ ಅಭಿಮಾನಿಗಳ ಗುಂಪು ನುಗ್ಗಿದ್ದು, ಹೆಚ್ಚಿನ ಸಿಬ್ಬಂದಿ ಇರದಿದ್ದರಿಂದ ಡಿಸಿಪಿಯವರೇ ಲಾಠಿ ಹಿಡಿದು, ಸಾಧ್ಯವಾದಷ್ಟು ಗುಂಪು ಚದುರಿಸಿದ್ದಾರೆ. ಆದರೂ ಸಹ ಜನ ದಟ್ಟಣೆಯ ನಡುವೆ ಸಿಲುಕಿಕೊಂಡಿದ್ದ ಸೈದುಲು ಅಡಾವತ್ ಅವರು ಗಾಯಗೊಂಡಿದ್ದು, ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

11 ಮಂದಿ ಸಾವು, 40ಕ್ಕೂ ಅಧಿಕ ಜನರಿಗೆ ಗಾಯ: ಕಾಲ್ತುಳಿತದಿಂದ 11 ಮಂದಿ ಮೃತಪಟ್ಟು, 40ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಅಭಿಮಾನಿಗಳು ಮೃತಪಟ್ಟ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಮೃತರ ಪೋಷಕರು, ಸಂಬಂಧಿಕರು ನೀಡಿರುವ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ 194 (ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳ ನಡುವೆ ಉಂಟಾದ ಗಲಭೆ) ಅಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.