ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಗೆ ಆಡಳಿತ ಸಮಿತಿ ನೇಮಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ದೈನಂದಿನ ವ್ಯವಹಾರ ನೋಡಿಕೊಳ್ಳಲು ದೆಹಲಿ ಹೈಕೋರ್ಟ್ ಆಡಳಿತ ಸಮಿತಿಯನ್ನು ನೇಮಿಸಿದೆ. ಅಲ್ಲದೇ 4 ತಿಂಗಳೊಳಗೆ ಹೊಸದಾಗಿ ಚುನಾವಣೆ ನಡೆಸಲು ಸೂಚಿಸಿದೆ.

ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶರು, ಚುನಾವಣಾ ಆಯುಕ್ತರು ಮತ್ತು ಸರ್ಕಾರಿ ಅಧಿಕಾರಿಯನ್ನು ಒಳಗೊಂಡಿರುವ ತ್ರಿಸದಸ್ಯ ಪೀಠ ಆಡಳಿತ ಸಮಿತಿಗೆ ಅಗತ್ಯ ಸಲಹೆ ನೀಡುವಂತೆ ಒಲಿಂಪಿಯನ್‌ಗಳಾದ ಅಭಿನವ್ ಬಿಂದ್ರಾ, ಅಂಜು ಬಾಬಿ ಜಾರ್ಜ್ ಮತ್ತು ಬೊಂಬೈಲಾ ದೇವಿ ಲೈಶ್ರಾಮ್‌ರನ್ನು ನ್ಯಾಯಾಲಯ ಕೇಳಿಕೊಂಡಿದೆ.

ಐಒಎಯ ಆಡಳಿತವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ. ಆರ್. ದವೆ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೇಷಿ ಮತ್ತು ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಒಳಗೊಂಡ ಆಡಳಿತ ಸಮಿತಿಗೆ ನೀಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಜೊತೆಗೆ ಐಒಎ ಕಾರ್ಯಕಾರಿ ಸಮಿತಿಯು ತನ್ನ ಎಲ್ಲ ಅಧಿಕಾರವನ್ನು ಆಡಳಿತ ಸಮಿತಿಗೆ ಹಸ್ತಾಂತರಿಸಬೇಕು ಎಂದು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ನಜ್ಮಿ ವಜೀರಿ ಅವರಿದ್ದ ಪೀಠ ತಿಳಿಸಿದೆ.