
ಉ.ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಪರ ವಿರೋಧ ಚರ್ಚೆ ಹುಟ್ಟುಹಾಕಿದ ಬಹುನಿರೀಕ್ಷಿತ ಶರಾವತಿ ಪಂಪ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯ ಕುರಿತು ಭಾರತದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇತ್ತೀಚೆಗೆ ಸಲ್ಲಿಸಿದ ಸ್ಥಳ ಪರಿಶೀಲನಾ ವರದಿಯಲ್ಲಿ, ಪರಿಹಾರವಾಗಿ ನೀಡಲಾದ ಭೂಮಿ ಸಾಕಾಗುವುದಿಲ್ಲ ಎಂಬ ಕಾರಣದೊಂದಿಗೆ ಯೋಜನೆಗೆ ಅನುಮತಿ ನೀಡಲು ನಿರಾಕರಿಸಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶಿವಮೊಗ್ಗ ಜಿಲ್ಲೆಯನ್ನು ಭೂಕುಸಿತ ಮತ್ತು ಪ್ರವಾಹಕ್ಕೆ ಗುರಿಯಾಗುವ ಜಿಲ್ಲೆಗಳಲ್ಲಿ ಒಂದೆಂದು ಪಟ್ಟಿ ಮಾಡಿರುವ ಸಮಯದಲ್ಲಿ ಈ ವರದಿ ಬಂದಿದೆ. ಈ ಯೋಜನೆಗಾಗಿ 60 ಡಿಗ್ರಿಗಳವರೆಗೆ ಕಡಿದಾದ ಇಳಿಜಾರು ಕಡಿತಗೊಳಿಸುವುದು, ಹೊಸ ರಸ್ತೆಗಳ ರಚನೆ, ಅಸ್ತಿತ್ವದಲ್ಲಿರುವ ರಸ್ತೆಗಳ ಆಗಲೀಕರಣ, 15,000 ಕ್ಕೂ ಹೆಚ್ಚು ಮರಗಳನ್ನು ಕಡಿಯುವುದು ಮತ್ತು ಭೂಗತ ಬಂಡಗಳನ್ನು ಸ್ಫೋಟಿಸಬೇಕಾಗುತ್ತದೆ. ಹೆಚ್ಚಿನ ಮಳೆಯಾಗುವುದರ ಜೊತೆಗೆ ಕಡಿದಾದ ಇಳಿಜಾರು ಮತ್ತು ಮಣ್ಣಿನ ಒಡ್ಡಿಕೊಳ್ಳುವಿಕೆಯಿಂದ ಈ ಪ್ರದೇಶವು ಭೂಕುಸಿತಕ್ಕೆ ಗುರಿಯಾಗುತ್ತದೆ ಎಂದು ವರದಿ ಹೇಳಿದೆ.

ಯೋಜನೆಯು ಎರಡು ಜಲಾಶಯಗಳನ್ನು ಒಳಗೊಂಡಿದೆ. 500 ಮೀಟರ್ ಆಳದಲ್ಲಿ ಒಂಬತ್ತು ಅಡಿ ವ್ಯಾಸದ ಭೂಗತ ಸುರಂಗಗಳ ನಿರ್ಮಾಣಕ್ಕಾಗಿ ಬಂಡೆಗಳನ್ನು ಕೊರೆಯುವುದು ಮತ್ತು ಸ್ಪೋಟಿಸುವುದು ಪರಿಸರಕ್ಕೆ ಮಾತ್ರವಲ್ಲದೆ ಮಾನವ ವಾಸಸ್ಥಳಗಳಿಗೂ ಹಾನಿಕಾರಕವಾಗಿದೆ ಎಂದು ವರದಿ ತಿಳಿಸಿದೆ. ಮೇ 7ರಿಂದ 9ರ ವರೆಗೆ ಅಧ್ಯಯನ ತಂಡವು ಯೋಜನಾ ಸ್ಥಳಗಳಿಗೆ ಭೇಟಿ ನೀಡಿತ್ತು. 2000 ಮೆಗಾ ವಿದ್ಯುತ್ ಉತ್ಪಾದಿಸುವ ಮತ್ತು ಸಂಗ್ರಹಿಸುವ ಯೋಜನೆಗಾಗಿ ಸಾಗರ, ಶಿವಮೊಗ್ಗ ಮತ್ತು ಹೊನ್ನಾವರ ಅರಣ್ಯ ವಿಭಾಗಗಳಲ್ಲಿ 54.155 ಹೆಕ್ಟೇರ್ ಅರಣ್ಯ ಭೂಮಿಗೆ ಅನುಮತಿ ಕೋರಿ ರಾಜ್ಯದ ಇಂಧನ ಇಲಾಖೆಯು ಕರ್ನಾಟಕ ಅರಣ್ಯ ಮತ್ತು ಪರಿಸರ ಇಲಾಖೆಗೆ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ಯೋಜನೆಯನ್ನು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ಕಾರ್ಯಗತಗೊಳಿಸುತ್ತಿದೆ.

ಪಶ್ಚಿಮ ಘಟ್ಟ ಪ್ರದೇಶವು ಭಾರತಕ್ಕೆ ಒಂದು ಪ್ರಮುಖ ಜಲಾನಯನ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಪಶ್ಚಿಮಕ್ಕೆ ಹರಿಯುವ 37 ಮತ್ತು ಪೂರ್ವಕ್ಕೆ ಹರಿಯುವ 3 ನದಿಗಳಿವೆ. ಪಶ್ಚಿಮ ಘಟ್ಟಗಳ ಮಧ್ಯ ಭಾಗವು ಭತ್ತ, ಏಲಕ್ಕಿ, ಕಾಳುಮೆಣಸು, ಅಡಿಕೆ ಮತ್ತು ಇತರ ಬೆಳೆಗಳ ಕೃಷಿಗೆ ಹೆಸರುವಾಸಿಯಾಗಿದೆ. ಈ ಯೋಜನೆಗಳು ಈ ಪ್ರದೇಶದ ಮೇಲೆ ಬೀರುವ ಪರಿಣಾಮವನ್ನು ನಿರ್ಧರಿಸಲು ಯಾವುದೇ ಅಧ್ಯಯನಗಳನ್ನು ನಡೆಸಲಾಗಿಲ್ಲ ಎಂದು ವರದಿ ತಿಳಿಸಿದೆ.
ಉತ್ತರ ಕನ್ನಡದಲ್ಲಿ ವಿವಿಧ ಯೋಜನೆಗಳಿಗಾಗಿ 18,000 ಹೆಕ್ಟೇರ್‌ಗಳಿಗೂ ಹೆಚ್ಚು ಅರಣ್ಯ ಭೂಮಿಯನ್ನು ಹಿಂದೆ ಕೆಪಿಸಿಎಲ್‌ಗೆ ಗುತ್ತಿಗೆ ನೀಡಲಾಗಿದೆ ಎಂದು ತಂಡವು ಗಮನಸೆಳೆದಿದೆ. ಯೋಜನೆಗೆ ಅರಣ್ಯ ತೆರವುಗೊಳಿಸುವ ಪ್ರಸ್ತಾವನೆಯನ್ನು ವರದಿ ತಿರಸ್ಕರಿಸಿದೆ. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ತಂಡವು ಇನ್ನೂ ಯೋಜನಾ ಸ್ಥಳಗಳನ್ನು ಪರಿಶೀಲಿಸಬೇಕಾಗಿದೆ. ರಾಜ್ಯ ವನ್ಯಜೀವಿ ಮಂಡಳಿಯು ಕೆಲವು ಷರತ್ತುಗಳೊಂದಿಗೆ ಯೋಜನೆಗೆ ಅನುಮತಿ ನೀಡಿದ್ದರೂ ಇದೀಗ ಯೋಜನೆಯ ಅನುಷ್ಠಾನ ಡೋಲಾಯಮಾನವಾಗಿದೆ.

