ಕಳೆದ ವಾರ ರಾಜ್ಯಾದ್ಯಂತ ಅಬ್ಬರಿಸಿದ್ದ ವರುಣ: ಈ ವಾರದಲ್ಲಿ ಹೇಗಿದೆ ಮಳೆ ಮುನ್ಸೂಚನೆ? –

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ಅಬ್ಬರಿಸಿದ್ದ ಮಳೆ ಈ ವಾರ ತುಸು ಬಿಡುವು ನೀಡಲಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಕೆಲ ಭಾಗಗಳಲ್ಲಿ ಮಳೆ ಪ್ರಮಾಣ ಸಾಮನ್ಯವಾಗಿದ್ದು, ರಾಜ್ಯಾದ್ಯಂತ ಈ ವಾರ ಕಾಲ ಮೋಡ ಕವಿದ ವಾತಾವರಣ ಇರಲಿ. ಆದರೆ, ಮಳೆಯ ಪ್ರಮಾಣ ಕಡಿಮೆಯಾಗಲಿದೆ.

ಅಲ್ಲದೆ, ಜೂನ್ 1 ರಿಂದ 6ರ ವರೆಗೂ ಅಲ್ಲಲ್ಲಿ ತುಂತುರ ಮಳೆಯಾಗುವ ನಿರೀಕ್ಷೆಯಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇರಲಿದೆ. ಎಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆ ಇಲ್ಲ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಯಲಹಂಕ, ದೇವನಹಳ್ಳಿ ಭಾಗಗಳಲ್ಲಿ ತುಂತುರು ಮಳೆಯಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂಬುದಾಗಿ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಗಳು ಬೆಂಗಳೂರಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ನಗರದ ತಾಪಮಾನ ಗರಿಷ್ಠ 27 ರಿಂದ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ರಿಂದ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಒಣ ಹವೆ ಮುಂದುವರೆಯಲಿದೆ.

ಕಳೆದೊಂದು ವಾರದಿಂದ ಕೊಡಗು, ಮಡಿಕೇರಿ, ಮೈಸೂರು, ದಕ್ಷಿಣ ಕನ್ನಡ, ಹಾಸನ ಸೇರಿದಂತೆ ವಿವಿಧ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಆಗಿದೆ. ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.