
ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿದ ಆರೋಪದಡಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಏಳು ಮಂದಿ ಸರ್ಕಾರಿ ಅಧಿಕಾರಿಗಳ ಮನೆ – ಕಚೇರಿ ಸೇರಿದಂತೆ ಏಕಕಾಲದಲ್ಲಿ 33 ಕಡೆಗಳಲ್ಲಿ ಶನಿವಾರ ಬೆಳಗ್ಗೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು ಈ ಸಂಬಂಧ ಒಟ್ಟು 24.47 ಕೋಟಿ ರೂ. ಚರ- ಸ್ಥಿರಾಸ್ತಿಗಳನ್ನ ಪತ್ತೆ ಹಚ್ಚಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ಉಡುಪಿ, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ವಾಸವಾಗಿರುವ ಏಳು ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸ ಸೇರಿದಂತೆ 33 ಕಡೆಗಳಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಚರ ಹಾಗು ಸ್ಥಿರಾಸ್ತಿ ಪತ್ತೆ ಹಚ್ಚಲಾಗಿದ್ದು, ಈ ಸಂಬಂಧ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿತ ಸರ್ಕಾರದ ಅಧಿಕಾರಿಗಳ ಮನೆ ಮೇಲೆ ದಾಳಿ ವೇಳೆ 17.92 ಕೋಟಿ ಮೌಲ್ಯದ ನಿವೇಶನ, ಮನೆ ಹಾಗೂ ಜಮೀನು ಪತ್ರಗಳು ಪತ್ತೆಯಾಗಿವೆ. 2.24 ಕೋಟಿ ಮೌಲ್ಯದ ಚಿನ್ನಾಭರಣ, 1.69 ಕೋಟಿ ಮೌಲ್ಯದ ವಾಹನಗಳು, 27.52 ಲಕ್ಷ ನಗದು ಒಳಗೊಂಡಂತೆ ಒಟ್ಟಾರೆ 24.47 ಕೋಟಿ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿದ್ದಲಿಂಗಪ್ಪ ನಿಂಗಪ್ಪ ಬನಸಿ, ಜಿಲ್ಲಾ ವ್ಯವಸ್ಥಾಪಕ. ದೇವರಾಜ ಅರಸ್ ಅಭಿವೃದ್ಧಿ ನಿಗಮ, ಸುವರ್ಣ ಸೌಧ:
ಇವರಿಗೆ ಸೇರಿದ ಒಟ್ಟು ಮೂರು ಕಡೆಗಳಲ್ಲಿ ಶೋಧ, 4 ನಿವೇಶನ, ಒಂದು ವಾಸದ ಮನೆ ಪತ್ತೆ, 36.64 ಲಕ್ಷ ಮೌಲ್ಯದ ಚಿನ್ನ, 10.60 ಲಕ್ಷ ಬೆಳೆಬಾಳುವ ವಾಹನಗಳು ಸೇರಿ 45.42 ಲಕ್ಷ ಮೌಲ್ಯದ ಚರಾಸ್ತಿ ಪತ್ತೆ. ಒಟ್ಟು 1.48 ಕೋಟಿ ಮೌಲ್ಯದ ಆಸ್ತಿ ಪತ್ತೆ.
ಶ್ರೀಶೈಲ್ ಸುಭಾಷ್ ತತ್ರಾನಿ. ಆಡಿಟ್ ಕಚೇರಿ ಬಾಗಲಕೋಟೆ:
ಒಟ್ಟು ನಾಲ್ಕು ಕಡೆಗಳಲ್ಲಿ ಶೋಧ, 3 ನಿವೇಶನಗಳು, 6 ವಾಸದ ಮನೆಗಳು, 6.38 ಎಕರೆ ಕೃಷಿ ಜಮೀನು ಪತ್ರಗಳು ಪತ್ತೆ, 21 ಲಕ್ಷದ ಚಿನ್ನಾಭರಣ, 45.60 ಲಕ್ಷ ಮೌಲ್ಯದ ವಾಹನಗಳು ಪತ್ತೆ, ಒಟ್ಟು 2.93 ಕೋಟಿಯ ಆಸ್ತಿ ಪತ್ತೆ.
ಅಮಿನ್ ಮುಕ್ತರ್ ಅಹಮದ್, ಅಧೀಕ್ಷಕ ಅಭಿಯಂತರ, ಲೋಕೋಪಯೋಗಿ ಇಲಾಖೆ, ಬಳ್ಳಾರಿ:
5 ಕಡೆಗಳಲ್ಲಿ ಶೋಧ, 31 ನಿವೇಶನ, 2 ವಾಸದ ಮನೆ, 5.30 ಎಕರೆ ಕೃಷಿ ಜಮೀನು, 25.49 ಲಕ್ಷ ನಗದು, 79 ಲಕ್ಷ ಮೌಲ್ಯದ ಚಿನ್ನ, 47.10 ಲಕ್ಷದ ಮೌಲ್ಯದ ವಾಹನಗಳು ಹಾಗೂ 10 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆ. ಒಟ್ಟು ಆಸ್ತಿ ಮೌಲ್ಯ 7.32 ಕೋಟಿ ರೂ.
ರಾಮಕೃಷ್ಣ ಬಾಳಪ್ಪ ಗುಡಗೇರಿ ಪಿಡಿಓ, ಬಾಡ ಗ್ರಾಮ ಪಂಚಾಯಿತಿ, ಶಿಗ್ಗಾವಿ ತಾಲೂಕು ಹಾವೇರಿ:
2 ಕಡೆಗಳಲ್ಲಿ ದಾಳಿ, 2 ನಿವೇಶನ, ಒಂದು ವಾಸದ ಮನೆ, 9.07 ಎಕರೆ ಕೃಷಿ ಜಮೀನು, 8.53 ಲಕ್ಷ ಬೆಲೆಯ ಚಿನ್ನ, 13.50 ಲಕ್ಷ ಮೌಲ್ಯದ ವಾಹನಗಳು, 10 ಲಕ್ಷ ರೂ. ಬೆಲೆಬಾಳುವ ಗೃಹಪಯೋಗಿ ವಸ್ತುಗಳು ಪತ್ತೆ. ಒಟ್ಟು ಆಸ್ತಿ 1.18 ಕೋಟಿ ರೂ.ಪತ್ತೆ
ಗಿರೀಶ್ ರಾವ್, ಲೆಕ್ಕಾಧಿಕಾರಿ, ಮೆಸ್ಕಾಂ, ಕಾರ್ಕಳ, ಉಡುಪಿ ಜಿಲ್ಲೆ:
5 ಕಡೆಗಳಲ್ಲಿ ಶೋಧ ಕಾರ್ಯ. 5 ನಿವೇಶನ, 1 ವಾಸದ ಮನೆ, 1 ವಾಣಿಜ್ಯ ಮಳಿಗೆ, 30.25 ಲಕ್ಷದ ಮೌಲ್ಯದ ಚಿನ್ನ, 9.50 ಲಕ್ಷ ಬೆಲೆಯ ವಾಹನಗಳು, 1.24 ಲಕ್ಷ ಮೌಲ್ಯದ ಮೊಬೈಲ್ ಪತ್ತೆ, ಒಟ್ಟು ಆಸ್ತಿ 2.89 ಕೋಟಿ ರೂ.ಪತ್ತೆ.
ಗಂಗಾಧರ ವೀರಪ್ಪ ಶಿರೋಳ, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ, ಗದಗ:
ಒಟ್ಟು 7 ಕಡೆಗಳಲ್ಲಿ ದಾಳಿ, 4 ನಿವೇಶನಗಳು, 7 ವಾಸದ ಮನೆಗಳು, 3.29 ಎಕರೆ ಕೃಷಿ ಜಮೀನು, 25 ಸಾವಿರ ನಗದು, 28.53 ಲಕ್ಷ ಚಿನ್ನ, ಬ್ಯಾಂಕ್ ಖಾತೆಯಲ್ಲಿ 21.25 ಲಕ್ಷ ನಗದು ಉಳಿತಾಯ ಸೇರಿದಂತೆ ಒಟ್ಟು 3.34 ಕೋಟಿ ರೂ. ಆಸ್ತಿ ಪತ್ತೆ.
ಹೆಚ್ ಸುರೇಶ್, ಮುಖ್ಯ ಅಭಿಯಂತರ, ಲೋಕೋಪಯೋಗಿ ಇಲಾಖೆ (ಉತ್ತರ ವಲಯ) ಸಂಪರ್ಕ ಮತ್ತು ಕಟ್ಟಡ (ಎನ್) ಧಾರವಾಡ:
ಒಟ್ಟು ಏಳು ಕಡೆಗಳಲ್ಲಿ ದಾಳಿ. 2 ನಿವೇಶನ, 2 ವಾಸದ ಮನೆ, 6 ವಾಣಿಜ್ಯ ಮಳಿಗೆ, 11.35 ಎಕರೆ ಕೃಷಿ ಜಮೀನು, 76,600 ಸಾವಿರ ರೂ.ನಗದು, 23.98 ಲಕ್ಷ ಮೌಲ್ಯದ ಚಿನ್ನ, 26 ಲಕ್ಷ ಬೆಲೆಯ ವಾಹನಗಳು, ಬ್ಯಾಂಕ್ ಖಾತೆಯಲ್ಲಿ 1.65 ಕೋಟಿ ನಗದು ಪತ್ತೆ, 25 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸೇರಿ 2.40 ಕೋಟಿ ರೂ. ಪತ್ತೆ. ಒಟ್ಟಾರೆ 5.30 ಕೋಟಿ ಆಸ್ತಿ ಪತ್ತೆ.

