ಶಿರಸಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅನುದಾನ ಪಡೆಯಲು ಇರುವ ಕೆಲವು ಅವೈಜ್ಞಾನಿಕ ಕ್ರಮಗಳನ್ನು ಕೈ ಬಿಡಿವಂತೆ ಕಲಾವಿದರ, ಕಲಾ ಸಂಘಟನೆಗಳ ಮನವಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗಿದೆ. ಶಿರಸಿ ಸಿದ್ದಾಪುರ ಕ್ಷೇತ್ರದ ಕಲಾವಿದರ ಸಂಘಟನೆಗಳು ಮನವಿ ನೀಡಿ ಕಾಗೇರಿ ಅವರಲ್ಲಿ ಹಕ್ಕೊತ್ತಾಯ ಮಾಡಿದಾಗ ಧನಾತ್ಮಕವಾಗಿ ಸ್ಪಂದಿಸಿ ಕಲಾವಿದರ ಜೊತೆ ತಾವಿರುವದಾಗಿ ಭರವಸೆ ನೀಡಿದ್ದಾರೆ.
ಕೋವಿಡ್ ನಂತರದ ಕಾಲಘಟ್ಟದಲ್ಲಿ ಚೇತರಿಸಿಕೊಳ್ಳುತ್ತಿದ್ದ ಕಲಾವಿದರ ಹಾಗೂ ಕಲಾ ಸಂಘಟನೆಗಳ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಇನ್ನಷ್ಟು ನಿಯಮಗಳನ್ನು ಗೊಂದಲಯುಕ್ತವಾಗಿ ಹೇರಿ ಹೇಗೆ ಅರ್ಜಿ ಸಲ್ಲಿಸಬೇಕು ಎಂದೇ ತಿಳಿಯದಂತಾಗಿದೆ. ಇಲಾಖೆ ನೀಡುವ ಅನುದಾನ ಸಾಮಾನ್ಯ ಕಲಾವಿದರಿಗೆ, ಕಲಾ ಸಂಘಟನೆಗಳಿಗೆ ಕಗ್ಗಂಟಾಗಿಸಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ದಿನಕ್ಕೊಂದು ದಾಖಲೆ ಕೇಳುತ್ತ, ಕಾಗದ ಮುಕ್ತ ವ್ಯವಸ್ಥೆ ಮಾಡಲು ಹೋಗಿ ಕಲಾವಿದರು ಮೂರು ನಾಲ್ಕು ವರ್ಷಗಳ ಕಡತ ಹಿಡಿದು ದೂರದ ಜಿಲ್ಲಾ ಕಚೇರಿಗೆ ಹೋಗಬೇಕಾಗಿದೆ. ಆನ್‌ಲೈನ್ ಅರ್ಜಿ ಹಾಕಿದ ಬಳಿಕವೂ ಸಲ್ಲಿಸಿದ ಅರ್ಜಿ ವಿವರ ಹಾಗೂ ದಾಖಲೆಗಳನ್ನು ಇಲಾಖೆ ಕೇಳಿ ಪಡೆಯುತ್ತಿದೆ. ಪ್ರಾಯೋಜಕತ್ವದ ಅನುದಾನ ಪಡೆಯಲು ಇಲಾಖೆಯ ಅಧಿಕಾರಿಗಳು ಕಡ್ಡಾಯ ಹಾಜರಾತಿ ಇರಬೇಕು ಎಂದೂ ಇಲಾಖೆ ಹೇಳಿದೆ. ಪ್ರಭಾರಿ ಹುದ್ದೆಯ, ಬೆರಳೆಣಿಕೆಯ ಸಿಬಂದಿಗಳ ಕಾರವಾರ ಕೇಂದ್ರದಿಂದ ಸಿದ್ದಾಪುರದ ತುದಿಗೆ ನಡೆಯುವ ರಾತ್ರಿಯ ಯಕ್ಷಗಾನಕ್ಕೆ ಅಧಿಕಾರಿಗಳು ಬಾರದೇ ಇದ್ದರೆ ಅನುದಾನ ಬರುವ ಸಾಧ್ಯತೆ ಇಲ್ಲ ಎಂದೂ ಸಂಘಟನೆಗಳು ಹೇಳಿವೆ.
ಈ ವೇಳೆ ನಾಗರಾಜ್ ಜೋಶಿ, ಭಾಗವತ ಕೇಶವ ಹೆಗಡೆ ಕೊಳಗಿ, ಮಹಾಬಲೇಶ್ವರ ಭಟ್ಟ ಇಟಗಿ, ಸುಜಾತ ದಂಟಕಲ್, ವಿ. ದತ್ತಮೂರ್ತಿ ಭಟ್ಟ, ಅಶೋಕ ಭಟ್ಟ ಸಿದ್ದಾಪುರ, ಗಣಪತಿ ಹುಲಿಮನೆ, ಪ್ರಭಾಕರ ಹಣಜಿಬೈಲ್, ದಿನೇಶ ಹೆಗಡೆ ಜನನಿ, ಗೀತಾ ಬೆಳಸಲಿಗೆ, ರಾಘವೇಂದ್ರ ಹೆಗಡೆ ಇತರರು ಇದ್ದರು.
ಫಲಕ ಇಲ್ಲದ ಸಂಸ್ಥೆಗೆ ನಿಯಮ ಬಿಗಿಗೊಳಿಸಲು ಹೋಗಿ ಕ್ರಿಯಾಶೀಲ ಸಂಸ್ಥೆಗಳಿಗೂ ಸಮಸ್ಯೆ ಆಗಿದೆ ಎಂಬುದು ಗಮನಕ್ಕೆ ಬಂದಿದೆ. ಸಮಸ್ಯೆ ಬಗೆ ಹರಿಯುವ ವಿಶ್ವಾಸವಿದೆ.
– ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್