ಹೊನ್ನಾವರದಲ್ಲಿ ಮಂಗನ ಕಾಯಿಲೆಗೆ 2 ನೇ ಬಲಿ

ಹೊನ್ನಾವರ: ಕೆ.ಎಫ್.ಡಿ. ಗೆ ಜಿಲ್ಲೆಯಲ್ಲಿ 2ನೇ ಬಲಿಯಾದ ಘಟನೆ ಮೇ 24ರ ಶನಿವಾರ ನಡೆದಿದೆ. ಇಲ್ಲಿನ ಹಳದಿಪುರ ಮೀನು ಮಾರುಕಟ್ಟೆ ಬಳಿಯ ನಿವಾಸಿ, ನಾಣಿ ಹಮ್ಮಣ ಗೌಡ (74) ಮೃತಪಟ್ಟವರು. ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಕೆ.ಎಫ್.ಡಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೇ 9 ರಂದು ನಾಣಿ ಹಮ್ಮಣ ಗೌಡ ಅವರಲ್ಲಿ ಕೆ.ಎಫ್.ಡಿ. ಪ್ರಕರಣ ಕಂಡು ಬಂದಿದ್ದು, ಆ ದಿನವೇ ತಾಲೂಕು ಆಸ್ಪತ್ರೆಯಿಂದ ತಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳು ಮಣಿಪಾಲಕ್ಕೆ ಕಳುಹಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಕೆ.ಎಫ್.ಡಿ.ಯೊಂದಿಗೆ ಕಿಡ್ನಿ ಹಾಗೂ ಲಿವರ್ ಸಂಬಂಧಿತ ಕಾಯಿಲೆಗಳಿದ್ದು, ಚಿಕಿತ್ಸೆ ಸ್ಪಂದಿಸಿದರೂ ಸಹ ಇತರ ವಯೋಸಹಜ ಕಾಯಿಲೆಗೆ ತುತ್ತಾಗಿದ್ದಾರೆ. ಇವರು ಜನಕಡ್ಕಲ ಕಡೆ ಒಣ ಎಲೆಗಳನ್ನು ಸಂಗ್ರಹಿಸುವ ಕೆಲಸಕ್ಕೆ ಹೋಗಿದ್ದು, ಅಲ್ಲಿಂದಲೇ ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾಗಿದೆ.