
ವೃಕ್ಷಮಾತೆ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನಿಧನದ ಬೆನ್ನಲ್ಲೇ ಇದೀಗ ಅದೇ ಭಾಗದ ಜಾನಪದ ಕೋಗಿಲೆ ಎಂದೇ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ವಿಧಿವಶರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯವರಾದ ತುಳಸಿ ಗೌಡ ಹಾಗೂ ಸುಕ್ರಿ ಬೊಮ್ಮ ಗೌಡ ಅವರು ಹಾಲಕ್ಕಿ ಸಮುದಾಯದವರಾಗಿದ್ದು, ಇದೀಗ ಆ ಸಮುದಾಯ ಈ ಇಬ್ಬರು ಹಿರಿಯ ಜೀವಗಳನ್ನು ಕಳೆದುಕೊಂಡಿದೆ.
ಕಾರವಾರ, (ಫೆಬ್ರವರಿ 13): ಹಾಡುಹಕ್ಕಿ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ (Sukri Bommagowda) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಸುಕ್ರಜ್ಜಿ ಇಂದು (ಫೆಬ್ರವರಿ 13) ಮುಂಜಾನೆ 3.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು, ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೇರಿ ಗ್ರಾಮದ ನಿವಾಸಿ ಆಗಿದ್ದರು. ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದ ಸುಕ್ರಿ ಬೊಮ್ಮ ಗೌಡ ಅವರನ್ನು ಜಾನಪದ ಕೋಗಿಲೆ ಅಂತಲೂ ಕರೆಯಲಾಗುತ್ತಿತ್ತು. ಆದ್ರೆ, ಜಾನಪದ ಕೋಗಿಲೆ ತನ್ನ ಹಾಡು ನಿಲ್ಲಿಸಿದೆ.
ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತಮಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಲು ಜನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ನಿರ್ಧರಿಸಿದ್ದರು. ಹಾಗೂ ತಮ್ಮ ಜನಾಂಗದ ಹಕ್ಕಿಗಾಗಿ ವಿಧಾನಸೌಧದಲ್ಲಿ ಪ್ರತಿಭಟನೆ ಕೂರುವ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಇದೀಗ ಹಾಲಕ್ಕಿ ಸಮುದಾಯ ತುಳಸಿ ಗೌಡ ಬೆನ್ನಲ್ಲೇ ಇದೀಗ ಸುಕ್ರಿ ಬೊಮ್ಮಗೌಡ ಅವರನ್ನೂ ಸಹ ಕಳೆದುಕೊಂಡಿದೆ.
ಸುಕ್ರಿ ಬೊಮ್ಮಗೌಡ ಬಾಲ್ಯದಲ್ಲಿದ್ದಾಗ ತಮ್ಮ ತಾಯಿ ಮೂಲಕ ಜಾನಪದ ಹಾಡುಗಳನ್ನು ಕಲಿತಿದ್ದರು. Jhuಜಾನಪದ ಹಾಡು, ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಸಾಂಪ್ರದಾಯಿಕ ಸಂಗೀತ ಹಾಡುಗಳನ್ನು ಸಂರಕ್ಷಿಸಿಕೊಂಡು ಹೋಗುವಲ್ಲಿ ಶ್ರಮಿಸಿದ್ದರು. ಹಾಡುಗಳು ಮಾತ್ರವಲ್ಲದೇ ವಿವಿಧ ಸಾಮಾಜಿಕ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದರು. ಇತ್ತೀಚೆಗೆ ಶಿರೂರಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತಕ್ಕೆ ಮರುಗಿದ್ದರು.
ಅವರು ಕಲೆಗಳಿಗೆ ನೀಡಿದ ಕೊಡುಗೆಗಳಿಗಾಗಿ ಮತ್ತು ಸಾಂಪ್ರದಾಯಿಕ ಬುಡಕಟ್ಟು ಸಂಗೀತವನ್ನು ಸಂರಕ್ಷಿಸುವಲ್ಲಿ ಮಾಡಿದ ಕೆಲಸಕ್ಕಾಗಿ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ . ಬೊಮ್ಮಗೌಡರಿಗೆ ಬಾಲ್ಯದಲ್ಲಿಯೇ ಅವರ ತಾಯಿ ಹಾಡಲು ಕಲಿಸಿದರು. ಮತ್ತು ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಸಾಂಪ್ರದಾಯಿಕ ಸಂಗೀತ ಮತ್ತು ಹಾಡುಗಳನ್ನು ಸಂರಕ್ಷಿಸಲು ಶ್ರಮಿಸಿದ್ದಾರೆ. 1988 ಅವರ ಕೆಲಸವನ್ನು ಕರ್ನಾಟಕ ರಾಜ್ಯ ಸರ್ಕಾರ ಗುರುತಿಸಿತು, ಮತ್ತು ಅಂದಿನಿಂದ ಅವರು ಕಲೆ ಮತ್ತು ಸಂಗೀತಕ್ಕೆ ನೀಡಿದ ಕೊಡುಗೆಗಳಿಗಾಗಿ ನಾಡೋಜ ಪ್ರಶಸ್ತಿ ಮತ್ತು ಜಾನಪದ ಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ರಾಜ್ಯ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ.
ಇವರಲ್ಲಿರುವ ಅದ್ಭುತ ಹಾಡುಗಾರಿಕೆ ಕಲೆಯನ್ನು ಗುರುತಿಸಿದ್ದ ಭಾರತ ಸರ್ಕಾರ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಪದ್ಮಶ್ರೀ ಮಾತ್ರವಲ್ಲದೇ, ಸ್ಥಳೀಯ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಸಂರಕ್ಷಿಸಿದ್ದಕ್ಕಾಗಿ 1988ರಲ್ಲಿ ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ, 1999ರಲ್ಲಿ ‘ಜಾನಪದ ಶ್ರೀ’ ಪ್ರಶಸ್ತಿ 2006ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನೀಡಲಾಗುವ ‘ನಾಡೋಜ’ ಗೌರವ ಹಾಗೂ 2009ರಲ್ಲಿ ಸಂದೇಶ ಕಲಾ ಪ್ರಶಸ್ತಿ, ಆಳ್ವಾಸ್ ನುಡಿಸಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಇವರಿಗೆ ಲಭಿಸಿದ್ದವು.



