ಛತ್ತೀಸ್‌ಗಢದ ಬಿಜಾಪುರದಲ್ಲಿ 8 ನಕ್ಸಲರ ಎನ್‌ಕೌಂಟರ್‌

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು (ಶನಿವಾರ) ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 8 ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ಚಕಮಕಿ ಮುಂದುವರೆದಿದೆ. 10 ನಕ್ಸಲರು ಪೊಲೀಸರ ಮುಂದೆ ಶರಣಾದ ಒಂದು ದಿನದ ಬಳಿಕ ಬಿಜಾಪುರದಲ್ಲಿ ಈ ಎನ್‌ಕೌಂಟರ್ ನಡೆದಿದೆ.

ಗಂಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಇಂದು ಬೆಳಿಗ್ಗೆ 8.30ರ ಸುಮಾರಿಗೆ ಗುಂಡಿನ ಚಕಮಕಿ ನಡೆದಿದ್ದು, ಅಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲ ವಿರೋಧಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜಿಲ್ಲಾ ಮೀಸಲು ಪಡೆ (DRG), ವಿಶೇಷ ಕಾರ್ಯಪಡೆ (STF), ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಅದರ ಗಣ್ಯ ಘಟಕವಾದ CoBRA (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಪಶ್ಚಿಮ ಬಸ್ತಾರ್ ವಿಭಾಗದ ಮಾವೋವಾದಿಗಳ ಉಪಸ್ಥಿತಿಯ ಬಗ್ಗೆ ಗುಪ್ತಚರ ವರದಿಗಳ ನಂತರ ಶುಕ್ರವಾರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ಈ ಜಿಲ್ಲೆಯಲ್ಲಿ ಒಟ್ಟು 6 ಲಕ್ಷ ರೂ. ಬಹುಮಾನ ಹೊಂದಿದ್ದ 10 ನಕ್ಸಲರು ಶರಣಾದ ಒಂದು ದಿನದ ನಂತರ ಈ ಎನ್‌ಕೌಂಟರ್ ನಡೆದಿದೆ.